Advertisement

ಪುಲ್ವಾಮಾ ಎನ್‌ಕೌಂಟರ್‌: ಮೂವರು ಉಗ್ರರ ಹತ್ಯೆ

08:30 AM Aug 10, 2017 | Harsha Rao |

ಶ್ರೀನಗರ: ಕಳೆದ ಕೆಲವು ದಿನಗಳಿಂದ ಕಣಿವೆ ರಾಜ್ಯ ದಲ್ಲಿ ನಡೆಯುತ್ತಿರುವ ಉಗ್ರರ ಸದೆಬಡಿಯುವ ಪ್ರಕ್ರಿಯೆ ಮುಂದುವರಿದಿದ್ದು, ಬುಧವಾರ ಪುಲ್ವಾಮಾದಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ.

Advertisement

ಪುಲ್ವಾಮದ ತ್ರಾಲ್‌ನ ಗುಲಾಬ್‌ ಬಾಗ್‌ ಪ್ರದೇಶದಲ್ಲಿ ಉಗ್ರರು ನುಸುಳಿದ್ದಾರೆ ಎಂಬ ನಿರ್ದಿಷ್ಟ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಆ ಪ್ರದೇಶಗಳಲ್ಲಿ ಪಹರೆ ಮತ್ತು ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ಎರಡೂ ಕಡೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾದವು. ಮೃತ ಉಗ್ರರು ಯಾವ ಸಂಘಟನೆಗೆ ಸೇರಿರುವವರು ಎಂದು ಇನ್ನೂ ತಿಳಿದುಬಂದಿಲ್ಲ. ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯಾಯಾಂಗ ಬಂಧನಕ್ಕೆ ಶಬೀರ್‌ ಶಾ: ಉಗ್ರರಿಗೆ ಹಣಕಾಸು ನೆರವು ನೀಡಿರುವ ಆರೋಪ ಸಂಬಂಧ ಬಂಧಿತನಾಗಿರುವ ಪ್ರತ್ಯೇಕತಾವಾದಿ ನಾಯಕ ಶಬೀರ್‌ ಶಾನನ್ನು ಬುಧವಾರ 14 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಿ ಸ್ಥಳೀಯ ನ್ಯಾಯಾಲಯ ಆದೇಶ ಹೊರಡಿಸಿದೆ. ದಶಕಗಳ ಹಿಂದೆ ಉಗ್ರ ಸಂಘಟನೆಯೊಂದಕ್ಕೆ ಅಕ್ರಮವಾಗಿ ಹಣ ವರ್ಗಾಯಿಸುತ್ತಿದ್ದ ಪ್ರಕರಣದಲ್ಲಿ ಶಾನನ್ನು ಜು.25ರಂದು ಬಂಧಿಸಲಾಗಿತ್ತು. ಆ.3ರಂದು ಜಾರಿ ನಿರ್ದೇಶನಾಲಯ ಈತನನ್ನು ವಿಚಾರಣೆಗೆ ಒಳಪಡಿಸಿತ್ತು. ಈಗ ವಿಚಾರಣೆ ಮುಕ್ತಾಯ ವಾಗಿದೆ ಎಂದು ಇ.ಡಿ. ಹೇಳಿದ ಬಳಿಕ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ಪೆಲ್ಲೆಟ್‌ ದಾಳಿಗೆ ಒಳಗಾದ 16ರ ಬಾಲಕ ಸಾವು
ಪುಲ್ವಾಮಾದಲ್ಲಿ ಎನ್‌ಕೌಂಟರ್‌ ವೇಳೆ ಭದ್ರತಾ ಪಡೆಯೊಂದಿಗೆ ಪ್ರತಿಭಟನಾ ಕಾರರು ಘರ್ಷಣೆಗಿಳಿದಿದ್ದ ವೇಳೆ ಪೆಲ್ಲೆಟ್‌ ಗನ್‌ ದಾಳಿಯಿಂದ ಗಾಯಗೊಂಡಿದ್ದ 16 ವರ್ಷದ ಬಾಲಕ ಸಾವಿಗೀಡಾಗಿದಾನೆ. ಮೊಹಮ್ಮದ್‌ ಯೂನಿಸ್‌ನ ಎದೆಗೆ ಪೆಲ್ಲೆಟ್‌ ಗಾಯಗಳಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಆತ ಅಸುನೀಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next