Advertisement

ದ್ವಿದಳ ಧಾನ್ಯಕ್ಕೆ ಪ್ರತ್ಯೇಕ ನೀತಿ ಅಗತ್ಯ

10:54 AM Mar 03, 2018 | Team Udayavani |

ಕಲಬುರಗಿ: ರೈತರ ಹಿತ ಕಾಪಾಡಲು ರಾಷ್ಟ್ರಮಟ್ಟದಲ್ಲಿ ದ್ವಿದಳ ಧಾನ್ಯ ಬೆಳೆಗೆ ಪ್ರತ್ಯೇಕ ನೀತಿ ಅಗತ್ಯ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಟಿ.ಎನ್‌. ಪ್ರಕಾಶ ಕಮ್ಮರಡಿ ಅಭಿಪ್ರಾಯಪಟ್ಟರು.

Advertisement

ಆಳಂದ ತಾಲೂಕು ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಕೃಷಿ ಬೆಲೆ ಆಯೋಗ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಕಲಬುರಗಿ ಕೃಷಿ ವಿಜ್ಞಾನ ಕೇಂದ್ರ ಸಂಯುಕ್ತಾಶ್ರಯದಲ್ಲಿ ರೈತರ ಆದಾಯ ಮತ್ತು ಕಲ್ಯಾಣ ವೃದ್ಧಿಗೆ ಅಗತ್ಯವಾದ ಗ್ರಾಮೀಣ ನೈರ್ಮಲ್ಯ, ಮೂಲಭೂತ ಸೌಕರ್ಯ ಮತ್ತು ಸಾಮಾಜಿಕ ವಿಚಾರಗಳ ಕುರಿತು ನಡೆದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆ ಆದ ಪರಿಣಾಮ ರಾಜ್ಯದಲ್ಲಿ ಹೆಚ್ಚಿನ ಪ್ರೊಟಿನ್‌ಗಳಿಂದ ಕೂಡಿದ ತೊಗರಿ ಇಳುವರಿ ಹೆಚ್ಚು ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ತಕ್ಕಂತೆ ಬೆಲೆ ಸಿಗದ ಪರಿಣಾಮ ರೈತರು ಕಂಗಾಲಾಗಿದ್ದಾರೆ. ರಾಜ್ಯದಲ್ಲಿ 100 ಲಕ್ಷ ಕ್ವಿಂಟಲ್‌ ತೊಗರಿ ಉತ್ಪಾದಿಸಿದರು ಕೇಂದ್ರ ಸರ್ಕಾರ ಕೇವಲ 26.5 ಲಕ್ಷ ಕ್ವಿಂಟಲ್‌ ಮಾತ್ರ ಖರೀದಿಸಿ ಹೊರದೇಶದಿಂದ 50 ಲಕ್ಷ ಕ್ವಿಂಟಲ್‌ ತೊಗರಿ ಉತ್ಪನ್ನ ಅಮದು ಮಾಡಿಕೊಂಡಿದೆ.

 ಇದು ಕೇಂದ್ರ ಸರ್ಕಾರದ ತಪ್ಪು ನಡೆ. ಹೀಗಾಗಿ ದ್ವಿದಳ ಧಾನ್ಯ ಖರೀದಿಗಾಗಿಯೇ ಕೆಎಂಎಫ್‌ ಮಾದರಿಯಲ್ಲಿ ಉತ್ಪಾದಕರ ಮಹಾಮಂಡಳ ಸ್ಥಾಪನೆಗೆ ಕೃಷಿ ಬೆಲೆ ಆಯೋಗ ರಚನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ ಎಂದರು.

ರಾಜ್ಯದಲ್ಲಿ ರೈತ ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ನೀಡಿ ಆದಾಯ ವೃದ್ಧಿಸಲು, ರೈತ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಂಡರೆ ಅವರ ಆರೋಗ್ಯ ಮತ್ತು ಸಾಮಾಜಿಕ ಜೀವನ ಸುಧಾರಿಸುತ್ತದೆ. ಅಲ್ಲದೆ ಹಳ್ಳಿಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವುದರ ಜತೆಗೆ ಒಟ್ಟಾರೆ ರೈತ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಬೇಕಾಗಿರುವ ಮೂಲಸೌಕರ್ಯಗಳ ಬಗ್ಗೆ ಬೆಳಕು ಚೆಲ್ಲಲು ಕೃಷಿ ಬೆಲೆ ಆಯೋಗ ರಾಜ್ಯದ ವಿವಿಧ ಭಾಗದ 8 ಜಿಲ್ಲೆಗಳ ಎಂಟು ಗ್ರಾಮ ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸಿದೆ. ಅಧ್ಯಯನದಲ್ಲಿ ಭಾಗವಹಿಸಿದ ರೈತರ ಪೈಕಿ ಶೇ.90ರಷ್ಟು ಯುವ ರೈತರು ತಮ್ಮ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿದಲ್ಲಿ ಕೃಷಿ ವೃತ್ತಿಯಲ್ಲಿ ಮುಂದುವರಿಯಲು ಇಚ್ಛೆ ವ್ಯಕ್ತಪಡಿಸಿದ್ದಾರೆ. ಉಳುಮೆ ಮಾಡುವವನ ಬದುಕು ಹಸುನಾಗಿಸಲು ರೈತನ ಸಮಗ್ರ ಕಲ್ಯಾಣಕ್ಕೆ ನಾಂದಿ ಹಾಡುವಂತಹ ಅಧ್ಯಯನ ವರದಿಯನ್ನು ಸರ್ಕಾರದ ಮುಂದಿಟ್ಟು ಸಮಸ್ಯೆ ಪರಿಹಾರಕ್ಕಾಗಿ ಆಯೋಗ ಕ್ರಮ ವಹಿಸಲಿದೆ. ರೈತರು ಕೇವಲ ಒಂದೇ ಬೆಳೆಗೆ ಅಂಟಿಕೊಳ್ಳದೆ ಪ್ರಕೃತಿ ಮುನಿಸಿಕೊಂಡಾಗ ಹತಾಸೆಗೆ ಒಳಗಾಗದೆ ಧೈರ್ಯದಿಂದ ಜೀವನ ಸಾಗಿಸಬೇಕು ಎಂದರು.

Advertisement

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ| ಎಸ್‌.ಎ. ಪಾಟೀಲ, ಕಲಬುರಗಿ ರೈತರು ವಾರ್ಷಿಕವಾಗಿ ಭೂಮಿಗೆ ಗೊಬ್ಬರ, ಬೀಜ ಇನ್ನಿತರ ಖರ್ಚು ಮತ್ತು ಆದಾಯ ಬಗ್ಗೆ ತಲೆ ಕೆಡಿಸಿಕೊಳ್ಳದ ಪರಿಣಾಮ ಸಾಲದ ಸೂಲದಲ್ಲಿದ್ದಾರೆ. ಮುಂದಾಲೋಚನೆ ಇಟ್ಟುಕೊಂಡು ಪ್ರತಿಯೊಂದಕ್ಕೂ ಲೆಕ್ಕ ಇಡಬೇಕು. ಇಲ್ಲಿನ ರೈತರಲ್ಲಿ ಆಲಸ್ಸಿತನ ಹೆಚ್ಚಿದ್ದು, ಬೆವರು ಸುರಿಸಿ ದುಡಿಯಬೇಕು ಎಂಬ ಮನಸ್ಸು ಪರಿವರ್ತನೆ ಆಗಬೇಕಾಗಿರುವುದು ಮುಖ್ಯವಾಗಿದೆ. ಒಣಭೂಮಿ ಹೊಂದಿರುವ ಕಲಬುರಗಿಯಲ್ಲಿ ನೀರು ಮತ್ತು ಮಣ್ಣು ಹರಿದು ಹೋಗದಂತೆ ಭೂಮಿ ಫಲವತ್ತತೆ ಕಾಯ್ದುಕೊಳ್ಳಲು 3 ಮೀಟರ್‌ ಅಗಲದ ಒಡ್ಡು ಹಾಕಿಕೊಂಡು ಅದರ ಮೇಲೆ ಹೂವು, ಔಡಿಲುಗಿಡ ನೆಡಬಹುದಾಗಿದೆ. ಪ್ರತಿ ಬಾರಿ ತೊಗರಿ, ಹತ್ತಿ, ಹೆಸರು ಎನ್ನದೆ ಮಣ್ಣಿನ ಗುಣಧರ್ಮ ಅರಿತು ಮಾರುಕಟ್ಟೆಯಲ್ಲಿ ಯಾವ ಬೆಳೆಗೆ ಉತ್ತಮ ಬೆಲೆ ಇದಿಯೋ ಅದನ್ನು ಬೆಳೆದು ಒಟ್ಟಾರೆ ವೈವಿದ್ಯಮಯ ಒಕ್ಕಲುತನವನ್ನು ವ್ಯವಹಾರಿಕವಾಗಿ ಮಾಡಿ ಆರ್ಥಿಕ ಪ್ರಗತಿ ಹೊಂದಬೇಕು ಎಂದು ಸಲಹೆ ನೀಡಿದರು. 

ಇದೇ ಸಂದರ್ಭದಲ್ಲಿ ಕೃಷಿ ಬಲೆ ಆಯೋಗದ ಪ್ರಾಯೋಜಕತ್ವದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯ ಹೊರತಂದಿರುವ ವಿವಿಧ 26 ಬೆಳೆಗಳ ವಸ್ತು ಸ್ಥಿತಿ ವಿಶ್ಲೇಷಣೆ ಕಿರುಹೊತ್ತಿಗೆ ಬಿಡುಗಡೆ ಮಾಡಲಾಯಿತು.

ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿ ಡಾ| ಎಚ್‌.ಎಂ. ಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ವಿಶ್ವವಿದ್ಯಾಲಯದ ಸಮ ಕುಲಪತಿ ಪ್ರೊ| ಜಿ.ಆರ್‌.ನಾಯಕ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ| ಎಸ್‌.ಕೆ. ಮೇಟಿ, ಡಾ| ಬಸಪ್ಪ, ಕಲಬುರಗಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ರಾಜು ತೆಗ್ಗೆಳ್ಳಿ, ರೈತ ಪ್ರತಿನಿಧಿ  ಗಿರಿಜಾಬಾಯಿ ಸೇರಿದಂತೆ ಕೋಲಾರ, ತುಮಕೂರು, ಚಿತ್ರದುರ್ಗ, ಬೆಳಗಾವಿ, ಹಾವೇರಿ, ರಾಯಚೂರು, ಮಂಗಳೂರು ಮತ್ತು ಕಲಬುರಗಿ ಜಿಲ್ಲೆಯ ರೈತರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಸಿಯುಕೆ ಸಾಮಾಜಿಕ ಕಾರ್ಯ ಇಲಾಖೆ ಮುಖ್ಯಸ್ಥ ಡಾ| ಚನ್ನವೀರ ಆರ್‌.ಎಂ. ಸ್ವಾಗತಿಸಿ ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಉತ್ಪನ್ನ ಹೆಚ್ಚಿರುವುದ ರಿಂದ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ನಿಗದಿಪಡಿಸಿರುವ ಮಿತಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರಕ್ಕೆ ಪಕ್ಷಭೇಧ ಮರೆತು ಜನಪ್ರತಿನಿಧಿಗಳು ಒತ್ತಡ ಹಾಕಬೇಕು. ಮದುವೆ-ಮುಂಜಿಗೆ ಲೆಕ್ಕ ಇಡುವ ರೈತರು ಆರ್ಥಿಕವಾಗಿ ಲಾಭ ತಂದುಕೊಡಬಹುದಾದ ಬೆಳೆಗಳ ಬಗ್ಗೆ ಲೆಕ್ಕ ಇಟ್ಟುಕೊಳ್ಳಲಾರದು ದುರದೃಷ್ಠಕರ. ಜಮೀನಿನ ಬದಲಾಗಿ ಇತ್ತೀಚಿಗೆ ಹೋಟೆಲ್‌ ಮತ್ತು ದಾಬಾಗಳು ರೈತನ ಅಡ್ಡಾಗಳಾಗುತ್ತಿವೆ. ಕೃಷಿ ಬೆಲೆ ಆಯೋಗ ರೈತರ ಸಮಗ್ರ ಕಲ್ಯಾಣ ಮತ್ತು ಆದಾಯ ವೃದ್ಧಿಸಲು ತೆಲ್ಲೂರ ಗ್ರಾಮವನ್ನು ಆಯ್ಕೆ ಮಡಿಕೊಂಡಿರುವುದು ಸಂತಸ. ತೆಲ್ಲೂರ ಗ್ರಾಮದಿಂದ ಈ ನಿಟ್ಟಿನಲ್ಲಿ ಉತ್ತಮ ಫಲಿತಾಂಶ ಹೊರಹೊಮ್ಮಲಿ ಎಂದು ಆಶಿಸಿದರು
ಬಿ.ಆರ್‌.ಪಾಟೀಲ ಶಾಸಕರು ಆಳಂದ

Advertisement

Udayavani is now on Telegram. Click here to join our channel and stay updated with the latest news.

Next