Advertisement

Pulse Polio: ಎಂದೆಂದಿಗೂ ಮರುಕಳಿಸದಿರಲಿ ಪೋಲಿಯೋ

12:46 PM Mar 02, 2024 | Team Udayavani |

ಭಾರತವನ್ನು ಪೋಲಿಯೋ ಮುಕ್ತವನ್ನಾಗಿಸಲು ಪಲ್ಸ್ ಪೋಲಿಯೋ ಲಸಿಕಾ ಅಭಿಯಾನವು 1995 ರಲ್ಲಿ ಪ್ರಾರಂಭಗೊಂಡಿತು. ವಿಶ್ವ ಆರೋಗ್ಯ ಸಂಸ್ಥೆಯು 2014 ಮಾರ್ಚ್ 27 ರಂದು ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರವೆಂದು ಫೋಷಿಸಿತು.

Advertisement

ಪಲ್ಸ್ ಪೋಲಿಯೋ ಅಭಿಯಾನ ಬಹಳಷ್ಟು ಯಶಸ್ಸು ಕಂಡಿತು. ಬಿಹಾರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಅತೀ ಹೆಚ್ಚು ಪ್ರಕರಣಗಳು ಕಂಡು ಬಂದರೂ ಸತತ ಪ್ರಯುತ್ನ ಹಾಗೂ  ಸಾಧನೆಯಿಂದ ಪೋಲಿಯೋ ಮುಕ್ತ ರಾಜ್ಯಗಳಾದವು.

ಭಾರತದಲ್ಲಿ 2011 ರಿಂದ ಈವರೆಗೆ ಯಾವುದೇ ಪೋಲಿಯೂ ಪ್ರಕರಣಗಳು ಕಂಡು ಬರದಿರುವುದು ಬಹಳ ಸಂತಸದ ವಿಷಯ. ಇದಕ್ಕೆ ಕಾರಣಕರ್ತರಾದ ಆರೋಗ್ಯ ಕಾರ್ಯಕರ್ತರು, ಪೋಷಕರು, ರೋಟರಿ ಇಂಟರ್ ನ್ಯಾಷನಲ್  ಹಾಗೂ ಭಾಗವಹಿಸಿದ ಎಲ್ಲಾ ಸಂಘ ಸಂಸ್ಥೆಗಳ ಸೇವೆಯು ಶ್ಲಾಘನೀಯ.

ಕರ್ನಾಟಕ ರಾಜ್ಯದಲ್ಲಿ 2005ರ ನಂತರ ಯಾವುದೇ ಪೋಲಿಯೋ ಪ್ರಕರಣಗಳು ವರದಿಯಾಗಿಲ್ಲ. ಆದರೂ ಎಚ್ಚರಿಕೆಯಿಂದ ಇರುವುದು ಅಗತ್ಯ. ಮಾರ್ಚ್ 3 ಭಾನುವಾರದಂದು ಪಲ್ಸ್ ಪೋಲಿಯೋ ಅಭಿಯಾನ ಒಂದೇ ಸುತ್ತಿನಲ್ಲಿ ನಡೆಯಲ್ಲಿದ್ದು 5 ವರ್ಷದೊಳಗಿನ ಎಲ್ಲಾ ಮಕ್ಕಳು 2 ಹನಿ ಪೋಲಿಯೋ ಲಸಿಕೆಯನ್ನು ತಪ್ಪದೇ ಪಡೆಯಬೇಕು.

ಲಸಿಕೆಯು ಎಲ್ಲಾ ಆರೋಗ್ಯ ಕೇಂದ್ರ, ಅಂಗನವಾಡಿ, ಶಾಲೆ, ಆಸ್ಪತ್ರೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಗ್ರಾಮ ಪಂಚಾಯಿತಿ, ಪ್ರವಾಸಿತಾಣ, ಸಮಾರಂಭಗಳು  ನಡೆಯುವ ಸ್ಥಳಗಳಲ್ಲಿ ಲಭ್ಯವಾಗಿರುತ್ತದೆ. ಲಸಿಕಾ ಕೆಂದ್ರಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಲಸಿಕೆ ನೀಡಲಾಗುವುದು.

Advertisement

ಗ್ರಾಮಾಂತರ ಬುಡಕಟ್ಟು ಜನಾಂಗ ಹಾಗೂ ವಲಸಿಗರ ಮಕ್ಕಳು ಹೆಚ್ಚಿನ ಅಪಾಯದಲ್ಲಿರುವುದರಿಂದ, ಈ ಮಕ್ಕಳು ನಿರ್ಲಕ್ಷಿಸದೇ ಲಸಿಕೆಯನ್ನು ಪಡೆಯಬೇಕು. ಮಕ್ಕಳ ಸುರಕ್ಷತೆಗಾಗಿ ಆರೋಗ್ಯ ಕಾರ್ಯಕರ್ತರು ಹೆಚ್ಚಿನ ಶ್ರಮ ವಹಿಸುತ್ತಾರೆ.

ಬೂತ್ ಮಟ್ಟದಲ್ಲಿ ಲಸಿಕೆಯನ್ನು ಪಡೆದ ನಂತರ ಮಕ್ಕಳ ಎಡ ಕಿರುಬೆರಳಿಗೆ ನೇರಳೆ ಬಣ್ಣದ ಗುರುತನ್ನು ಹಾಕಲಾಗುವುದು. ಇದು ಲಸಿಕೆಯನ್ನು ಪಡೆಯದ ಮಕ್ಕಳನ್ನು ಪತ್ತೆ ಹಚ್ಚಲು ಬಹಳ ಸಹಕಾರಿ.

ನಾನಾ ಕಾರಣಗಳಿಂದ (ಆರೋಗ್ಯ ಸಮಸ್ಯೆ, ಸಮಾರಂಭಗಳು, ಪ್ರಯಾಣ, ಜಾತ್ರೆ, ಸಂತೆ) ಲಸಿಕೆಯನ್ನು ಪಡೆಯದ ಮಕ್ಕಳಿಗೆ ಮನೆ ಭೇಟಿಯ ಸಮಯದಲ್ಲಿ (ಮಾರ್ಚ್ 2 ರಿಂದ 4 ರವರೆಗೆ) ಆರೋಗ್ಯ ಕಾರ್ಯಕರ್ತೆಯರು ಲಸಿಕೆಯನ್ನು ನೀಡುತ್ತಾರೆ. ಪೋಲಿಯೋ ರೋಗವು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದ್ದು 5 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಪೋಲಿಯೋ ಭಯಾನಕ ರೋಗವಾಗಿದ್ದು, 3 ವಿಧದ ವೈರಾಣುಗಳಿಂದ ಹರಡುತ್ತದೆ. ಈ ವೈರಾಣುಗಳು ಕಲುಷಿತ ನೀರಿನ ಮೂಲಕ ದೇಹವನ್ನು ಪ್ರವೇಶಿಸಿ ಮಕ್ಕಳ ಸಣ್ಣ ಕರುಳಿನಲ್ಲಿ ದ್ವಿಗುಣಗೊಂಡು ರಕ್ತದ ಮೂಲಕ ಬೆನ್ನು ಹುರಿಯ ನರಮಂಡಲವನ್ನು ಪ್ರವೇಶಿಸಿ ನರಕೋಶಗಳನ್ನು ನಾಶಮಾಡಿ ಶಾಶ್ವತ ಅಂಗವೈಕಲ್ಯವನ್ನು ಉಂಟುಮಾಡುತ್ತದೆ.

ಆದುದರಿಂದ  ಪೋಲಿಯೋ ಲಸಿಕೆಯ 2 ಹನಿಗಳು ಮಕ್ಕಳಲ್ಲಿ ಉಂಟಾಗುವ ಶಾಶ್ವತ ಅಂಗವೈಕಲ್ಯವನ್ನು ತಡೆಗಟ್ಟುತ್ತದೆ. ಪೋಲಿಯೋ ಲಸಿಕೆಯು ಬಹಳ ಸುರಕ್ಷಿತ. ಲಸಿಕೆಯನ್ನು ಪಡೆಯದ ಮಕ್ಕಳಲ್ಲಿ ಪೋಲಿಯೋ ವಿರುದ್ಧ ಹೋರಾಡುವ ಪ್ರತಿರೋಧ ಶಕ್ತಿಯುವಿರುವುದಿಲ್ಲ ಇದ್ದರಿಂದ ಮಕ್ಕಳು ಪೋಲಿಯೋ ರೋಗಕ್ಕೆ ತುತ್ತಾಗುತ್ತಾರೆ.

ಭಾರತ ದೇಶವು ಕಳೆದ 10 ವರ್ಷಗಳಿಂದ ಪೋಲಿಯೋ ಮುಕ್ತವಾದರೂ, ನೆರೆರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿ ಈಗಾಗಲೇ 12 ಪೋಲಿಯೋ ಪ್ರಕರಣಗಳು ವರದಿಯಾಗಿದೆ. ಆದುದರಿಂದ  ನಾವು ಎಚ್ಚರಿಕೆಯಿಂದಿದ್ದು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ನೀಡಿ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ದೇಶವು ಎಂದೆಂದಿಗೂ ಮರುಕಳಿಸದಿರಲಿ  ಪೋಲಿಯೋ.

ಡಾ. ರಾಮಚಂದ್ರ ಕಾಮತ್, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next