Advertisement

ಚಿತ್ರ ವಿಮರ್ಶೆ: ಪುಕ್ಸಟ್ಟೆ ಲೈಫ್ ನಲ್ಲಿ ಭರಪೂರ ಖುಷಿ ಇದೆ!

12:10 PM Sep 25, 2021 | Team Udayavani |

ಆತ ಬೀಗ ರಿಪೇರಿ ಮಾಡಿಕೊಂಡಿರುವ ಹುಡುಗ ಶಹಜಹಾನ್‌. ತನ್ನ ಪಾಡಿಗೆ ತನ್ನ ಕಸುಬು ಮಾಡಿಕೊಂಡು ಬದುಕುತ್ತಿದ್ದ ಈ ಚಾಲಾ”ಕೀ’ ಶಹಜಹಾನನಿಗೆ, ಮುಂದೊಂದು ದಿನ ತಾನು ಮಾಡುವ ನಕಲಿ “ಕೀ’ ಕೆಲಸವೇ ಮುಳ್ಳಾಗುತ್ತದೆ. ಪೊಲೀಸರ “ಕಳ್ಳಾಟಕ್ಕೆ ನಕಲಿ “ಕೀ’ ಮಾಡಿಕೊಟ್ಟು ಅದರಲ್ಲೇ “ಲಾಕ್‌’ ಆಗುವ ಶಹಜಹಾನ್‌, ತಾನೆಂಥ ವಿಷ ವರ್ತುಲದಲ್ಲಿ ಸಿಲುಕಿಕೊಂಡಿದ್ದೇನೆ ಅನ್ನೊದು ಗೊತ್ತಾಗುವ ಹೊತ್ತಿಗೆ ಆತನ ಜೀವನ ಮತ್ತು ಸಿನಿಮಾ ಎರಡೂ ಮಧ್ಯಂತರಕ್ಕೆ ಬಂದಿರುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಪುಕ್ಸಟ್ಟೆ ಲೈಫು’ ಫ‌ಸ್ಟ್ ಹಾಫ್ ಕಥೆ.

Advertisement

ಈ “ಕೀ’ ಕೊಡುವ ಕಳ್ಳ-ಪೊಲೀಸ್‌ ಆಟದಲ್ಲಿ ಕೊನೆಗಾದರೂ, ಶಹಜಹಾನ್‌ ಅನ್‌”ಲಾಕ್‌’ ಆಗಿ ಅದರಿಂದ ಹೊರಬರುತ್ತಾನಾ? ಅನ್ನೋದು ಗೊತ್ತಾಗಬೇಕಾದರೆ, ಕ್ಲೈಮ್ಯಾಕ್ಸ್‌ ವರೆಗೂ “ಪುಕ್ಸಟ್ಟೆ ಲೈಫು’ ಸಿನಿಮಾ ನೋಡಬೇಕು. ನಮ್ಮ ನಡುವೆಯೇ ನಡೆಯುವಂಥ ಕೆಲವೊಮ್ಮೆ ಮಾತ್ರ ಬೆಳಕಿಗೆ ಬಂದು ಸುದ್ದಿಯಾಗುವಂಥ ಪೊಲೀಸರ ಕಳ್ಳಾಟ, ಅಧಿಕಾರ ದುರುಪಯೋಗ, ಧನದಾಹಕ್ಕೆ ಬಲಿಪಶುಗಳಾಗುವ ಅಮಾಯಕರು, ಅಸಹಾಯಕ ಅಳಲು… ಹೀಗೆ ವ್ಯವಸ್ಥೆಯ ಲೋಪಗಳನ್ನು ಅಣಕಿಸುತ್ತ ಇಡೀ ಚಿತ್ರ ಸಾಗುತ್ತದೆ. ತುಂಬ ಗಂಭೀರ ವಿಷಯವನ್ನು ತಿಳಿಹಾಸ್ಯದ ಜೊತೆಗೆ ನೋಡುಗರಿಗೆ ತಲುಪಿಸುವ ಪ್ರಯತ್ನ ತೆರೆಮೇಲೆ ಕಾಣುತ್ತದೆ. ಚಿತ್ರದ ಫ‌ಸ್ಟ್‌ ಹಾಫ್ ಸರಾಗವಾಗಿ ಸಾಗಿದರೆ, ಸೆಕೆಂಡ್‌ ಹಾಫ್ ಒಂದಷ್ಟು ಟ್ವಿಸ್ಟ್‌, ಟರ್ನ್ಸ್ ಮಧ್ಯೆ ಕೆಲಕಾಲ ನೋಡುಗರನ್ನು ಹಿಡಿದು ಕೂರಿಸುತ್ತದೆ. ಸಣ್ಣಪುಟ್ಟ ಕೊರತೆಗಳನ್ನು ಬದಿಗಿಟ್ಟು ನೋಡಿದರೆ “ಪುಕ್ಸಟ್ಟೆ ಲೈಫು ಒಂದು ಚೆಂದದ ಸಿನಿಮಾ.

ಸಿನಿಮಾ ನೋಡಿ ಹೊರಬಂದ ನಂತರವೂ ಸಿನಿಮಾ ನಮ್ಮನ್ನು ಕಾಡುತ್ತದೆ. ಆ ಮಟ್ಟಿಗೆ ನಿರ್ದೇಶಕರು ಒಂದು ನೀಟಾದ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಮೇಲ್ನೋಟಕ್ಕೆ ಸಿಂಪಲ್‌ ಎನಿಸುವ ಕಥೆಯನ್ನು ತುಂಬಾ ಕಾಡುವಂತೆ ಹಾಗೂ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಕಟ್ಟಿಕೊಟ್ಟಿರೋದು ನಿರ್ದೇಶಕರ ಜಾಣ್ಮೆಗೆ ಸಾಕ್ಷಿ. ಸಿನಿಮಾ ನೋಡಿದಾಗ ಪ್ರೇಕ್ಷಕನ ಹೃದಯ ಭಾರವಾಗುತ್ತದೆ. ಅದಕ್ಕೆ ಕಾರಣ ಸಂಚಾರಿ ವಿಜಯ್‌. ಇಂತಹ ಒಂದು ಒಳ್ಳೆಯ ಸಿನಿಮಾ ಬಂದಾಗ ಆ ನಟನೇ ನಮ್ಮ ಜೊತೆಗಿಲ್ಲವಲ್ಲ ಎಂಬ ನೋವು ಕಾಡದೇ ಇರದು.

ಇದನ್ನೂ ಓದಿ:ಶಾರ್ಜಾದ ಐಪಿಎಲ್ ಪಂದ್ಯದಲ್ಲಿ ಹುಲಿ ಕುಣಿತದ ಸಂಭ್ರಮ: ವಿಡಿಯೋ ವೈರಲ್

ಇನ್ನು ಚಿತ್ರದ ಕಲಾವಿದರ ಬಗ್ಗೆ ಹೇಳುವುದಾದರೆ, ಬೀಗದಿಂದ ಬದುಕು ಕಟ್ಟಿಕೊಂಡ ಶಹಜಹಾನ್‌ ಪಾತ್ರದಲ್ಲಿ ನಟ ಸಂಚಾರಿ ವಿಜಯ್ ಅವರದ್ದು ಅತ್ಯಂತ ಸಹಜ ಅಭಿನಯ. ತನ್ನ ಲುಕ್‌, ಮ್ಯಾನರಿಸಂ, ಡೈಲಾಗ್ ನಿಂದ ಮುಸ್ಲಿಂ ಹುಡುಗನಾಗಿ ವಿಜಯ್‌ ನೋಡುಗರಿಗೆ ಆಪ್ತವಾಗುತ್ತಾರೆ. ಉಳಿದಂತೆ ಇಡೀ ಚಿತ್ರವನ್ನು ತಮ್ಮ ಪಾತ್ರದ ಮೂಲಕ ಕರೆದುಕೊಂಡು ಹೋಗುವುದು ಅಚ್ಯುತ

Advertisement

ಕುಮಾರ್‌ ಮತ್ತುರಂಗಾಯಣ ರಘು ಅಭಿನಯ. ಇನ್ನುಳಿದ ಬಹುತೇಕ ಕಲಾವಿದರು ಸೀಮಿತ ಚೌಕಟ್ಟಿನಲ್ಲಿ ಅಚ್ಚುಕಟ್ಟು ಅಭಿನಯ ನೀಡಿದ್ದಾರೆ. ತಾಂತ್ರಿಕವಾಗಿಚಿತ್ರದ ಛಾಯಾಗ್ರಹಣ ಚೆನ್ನಾಗಿದೆ. ಒಂದೆರಡು ಹಾಡುಗಳು ಗುನುಗುವಂತಿದೆ.  ಚಿತ್ರದ ಸಂಕಲನ, ಹಿನ್ನೆಲೆ ಸಂಗೀತ, ಕಲರಿಂಗ್‌ ಹೀಗೆ ಒಂದಷ್ಟು ತಾಂತ್ರಿಕ ಕೆಲಸದ ಕಡೆಗೆ ಇನ್ನಷ್ಟು ಗಮನ ಕೊಡಬಹುದಿತ್ತು.

ಒಟ್ಟಾರೆ, ಆರಂಭದಿಂದಲೂ ತನ್ನ ಟೈಟಲ್, ಪೋಸ್ಟರ್‌ ಮೂಲಕ ಸಿನಿಪ್ರಿಯರ ಗಮನ ಸೆಳೆದು, ನಿರೀಕ್ಷೆ ಮೂಡಿಸಿದ್ದ ಪುಕ್ಸಟ್ಟೆ ಲೈಫ‌ು’ ತೆರೆಮೇಲೆ ಕೂಡ ಪ್ರೇಕ್ಷಕರ ಆ ನಿರೀಕ್ಷೆಯನ್ನು ಹುಸಿ ಮಾಡಲಾರದು ಎನ್ನಲು ಅಡ್ಡಿಯಿಲ್ಲ.

ಚಿತ್ರ: ಪುಕ್ಸಟ್ಟೆ ಲೈಫು

ರೇಟಿಂಗ್‌: ***

ನಿರ್ದೇಶನ: ಅರವಿಂದ ಕುಪ್ಳೀಕರ್

ನಿರ್ಮಾಣ: ಸರ್ವಸ್ವ ಸ್ಟುಡಿಯೋ

ತಾರಾಗಣ: ಸಂಚಾರಿ ವಿಜಯ್, ಅಚ್ಯುತ ಕುಮಾರ್‌, ರಂಗಾಯಣ ರಘು, ಮಾತಂಗಿ ಪ್ರಸನ್‌ ಮತ್ತಿತರರು

ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next