ಬ್ರಿಸ್ಬೇನ್: ಈ ವರ್ಷದ ಆರಂಭದಲ್ಲಿ ಭಾರತ ತಂಡ ಆಸೀಸ್ ವಿರುದ್ಧ ಗಾಬ್ಬಾ ಕೋಟೆ ಒಡೆದು ಜಯ ಸಾಧಿಸಿದ್ದು ಎಲ್ಲರಿಗೂ ಗೊತ್ತಿದೆ. ಗಾಬ್ಬಾದಲ್ಲಿ ತಮ್ಮನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂದು ಮೆರೆಯುತ್ತಿದ್ದ ಕಾಂಗರೂಗಳಿಗೆ ಅಜಿಂಕ್ಯ ಹುಡುಗರು ಸೋಲಿನ ರುಚಿ ತೋರಿಸಿದ್ದರು.
ಆಸೀಸ್ ಆರಂಭಿಕ ಆಟಗಾರ ಮಾರ್ಕಸ್ ಹ್ಯಾರಸ್ ಈ ಪಂದ್ಯದ ಬಗ್ಗೆ ಮಾತನಾಡಿದ್ದಾರೆ. ಚೇತಶ್ವರ ಪೂಜಾರರ ಆಟ ಅಂದು ನಮ್ಮನ್ನು ಸೋಲಿಸಿತ್ತು ಎಂದು ಹ್ಯಾರಿಸ್ ಅಭಿಪ್ರಾಯ ಪಟ್ಟಿದ್ದಾರೆ. ಅಂದಹಾಗೆ 1988-89ರ ಬಳಿಕ ಗಾಬ್ಬಾ ಮೈದಾನದಲ್ಲಿ ಆಸೀಸ್ ಮೊದಲ ಸೋಲನುಭವಿಸಿತ್ತು.
ಅಂದು 56 ರನ್ ಗಳಿಸಿದ್ದ ಚೇತೇಶ್ವರ ಪೂಜಾರ 211 ಎಸೆತಗಳನ್ನು ಎದುರಿಸಿದ್ದರು. ಆರಂಭಿಕ ಆಟಗಾರ ಶುಭ್ಮನ್ ಗಿಲ್ ಮತ್ತು ರಿಷಭ್ ಪಂತ್ ಜೊತೆ ಉಪಯುಕ್ತ ಜೊತೆಯಾಟವಾಡಿದ್ದರು. ಇದರ ಸಹಾಯದಿಂದ ಭಾರತ 329 ರನ್ ಗುರಿಯನ್ನು ಬೆನ್ನಟ್ಟಿ ಜಯ ಸಾಧಿಸಿತ್ತು.
ಇದನ್ನೂ ಓದಿ:ಮಿನುಗದ ತಾರೆಯರು.. ಆರಂಭದಲ್ಲಿ ಮಿಂಚಿದರೂ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗದವರು..!
ಅಂತಿಮ ದಿನದ ಪಂದ್ಯ ಅದ್ಭುತವಾಗಿತ್ತು. ಅಷ್ಟು ದೊಡ್ಡ ಗುರಿಯನ್ನು ಅವರು ಬೆನ್ನಟ್ಟುವ ಪ್ರಯತ್ನ ಮಾಡುತ್ತಾರೋ ಇಲ್ಲವೋ ಎನ್ನುವುದೇ ನಮ್ಮ ಯೋಚನೆಯಾಗಿತ್ತು. ಪಂತ್ ಅಂದು ತನ್ನ ಶ್ರೇಷ್ಠ ಆಟ ಆಡಿದ್ದ. ಆದರೆ ಪೂಜಾರ ಮಾತ್ರ ನಮಗೆ ತಡೆಯಾಗಿ ನಿಂತಿದ್ದರು. ಪೂಜಾರನನ್ನು ಔಟ್ ಮಾಡುವುದೇ ನಮಗೆ ಸವಾಲಾಗಿತ್ತು. ಆತ ಮಧ್ಯದಲ್ಲಿ ನಿಂತು ಆಟವಾಡಿದ, ಆತನ ಸುತ್ತಲೂ ಉಳಿದವರು ಆಡಿದರು. ಆತ ಅಂದು ಆಸ್ಟ್ರೇಲಿಯಾ ಆಟಗಾರನಂತೆ ಆಡಿದ ಎಂದು ಹ್ಯಾರಿಸ್ ಅಭಿಪ್ರಾಯಪಟ್ಟಿದ್ದಾರೆ.