ಲೂಯಿಸ್ವಿಲ್ಲೆ: ಭಾರತದ 28 ವರ್ಷದ ಆಟಗಾರ್ತಿ ಪೂಜಾ ತೋಮರ್ ಅವರು ಪ್ರತಿಷ್ಠಿತ ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಪಂದ್ಯ ಗೆದ್ದು ಬೀಗಿದ್ದಾರೆ. ಯುಎಫ್ ಸಿ ಪಂದ್ಯ ಗೆದ್ದ ಮೊದಲ ಭಾರತೀಯೆ ಎಂಂಬ ದಾಖಲೆಯನ್ನು ಪೂಜಾ ತೋಮರ್ ಬರೆದಿದ್ದಾರೆ.
ತೋಮರ್ 30-27, 27-30, 29-28 ರ ಸ್ಪ್ಲಿಟ್ ನಿರ್ಧಾರದಿಂದ ರಾಯನ್ನೆ ಅಮಂಡಾ ಡಾಸ್ ಸ್ಯಾಂಟೋಸ್ ಅವರನ್ನು ಸೋಲಿಸಿದರು.
ಗೆಲುವಿನ ಬಳಿಕ ಮಾತನಾಡಿದ ಪೂಜಾ, “ಈ ಗೆಲುವು ನನ್ನದಲ್ಲ. ಈ ಗೆಲುವು ಎಲ್ಲಾ ಭಾರತೀಯ ಅಭಿಮಾನಿಗಳಿಗೆ ಮತ್ತು ಎಲ್ಲಾ ಭಾರತೀಯ ಹೋರಾಟಗಾರರಿಗೆ. ನಾನು ಗೆಲ್ಲಬೇಕು ಮತ್ತು ಭಾರತೀಯ ಫೈಟರ್ ಗಳು ಸೋಲುವವರಲ್ಲ ಎಂಬುದನ್ನು ಜಗತ್ತಿಗೆ ತೋರಿಸಬೇಕು ಎಂದು ನಾನು ಭಾವಿಸಿದ್ದೇನೆ” ಎಂದು ಹೇಳಿದ್ದಾರೆ.
“ನಮ್ಮ ಭಾರತೀಯ ಹಾಡು ಮತ್ತು ಭಾರತೀಯ ಧ್ವಜದೊಂದಿಗೆ ಹೊರ ನಡೆಯುವುದು ನನಗೆ ರೋಮಾಂಚನ ನೀಡಿತು. ನನಗೆ ಹೆಮ್ಮೆ ತಂದಿತು” ಎಂದು ಅವರು ಹೇಳಿದರು.
ಉತ್ತರ ಪ್ರದೇಶದ ಮುಜಾಫರ್ ನಗರದ ಬುಧಾನಾ ಗ್ರಾಮದಲ್ಲಿ ಜನಿಸಿದ ತೋಮರ್, ಕಳೆದ ವರ್ಷ ಯುಎಫ್‌ಸಿಯೊಂದಿಗೆ ಒಪ್ಪಂದ ಮಾಡಿಕೊಂಡ ಮೊದಲ ಭಾರತೀಯ ಮಹಿಳಾ ಫೈಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಮಾಜಿ ರಾಷ್ಟ್ರೀಯ ವುಶು ಚಾಂಪಿಯನ್, ತೋಮರ್ ಮ್ಯಾಟ್ರಿಕ್ಸ್ ಫೈಟ್ ನೈಟ್ ಮತ್ತು ಒನ್ ಚಾಂಪಿಯನ್‌ಶಿಪ್ ಸೇರಿದಂತೆ ಇತರ ಚಾಂಪಿಯನ್‌ಶಿಪ್‌ಗಳಲ್ಲಿ ಕಾಣಿಸಿಕೊಂಡಿದ್ದರು.