ಬೀದರ: ಬೀದರ ದಕ್ಷಿಣ ಕ್ಷೇತ್ರದ ಆಣದೂರು ಸಮೀಪದಲ್ಲಿ ನಿರ್ಮಾಣವಾಗಲಿರುವ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಪ್ರಾದೇಶಿಕ ಕೇಂದ್ರಕ್ಕೆ ರವಿವಾರ ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಶಾಸಕ ಬಂಡೆಪ್ಪ ಖಾಶೆಂಪುರ್ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಸಚಿವ ಭಗವಂತ ಖೂಬಾರವರು, ಬೀದರ ಜಿಲ್ಲೆಯಲ್ಲಿ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ನಿರ್ಮಾಣವಾಗುತ್ತಿರುವುದು ಸಂತಸದ ವಿಷಯ. ಪ್ರಾದೇಶಿಕ ಕೇಂದ್ರ ನಿರ್ಮಾಣದಿಂದ ಈ ಭಾಗದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುತ್ತದೆ. ಈ ಪ್ರಾದೇಶಿಕ ಕೇಂದ್ರ ಒಳ್ಳೆಯ ಉತ್ತಮ ಕೇಂದ್ರವಾಗಲಿದೆ ಎಂದರು.
ಶಾಸಕ ಬಂಡೆಪ್ಪ ಖಾಶೆಂಪುರ್ ಮಾತನಾಡಿ, ಶಿಕ್ಷಣದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಮಾಡಬೇಕು. ಆ ನಿಟ್ಟಿನಲ್ಲಿ ಇದು ರಾಜ್ಯಕ್ಕೆ ಮಾದರಿಯಾಗಬೇಕು. ಬೀದರ ಜಿಲ್ಲೆಗೆ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ತರುವ ನಿಟ್ಟಿನಲ್ಲಿ ಬಹಳಷ್ಟು ಶ್ರಮಿಸಲಾಗಿದೆ. ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದಿಂದ ಪ್ರಾದೇಶಿಕ ಕೇಂದ್ರಕ್ಕೆ ಭೂಮಿ ಲಭ್ಯವಾಗಿದೆ ಎಂದರು.
ಕುಲಪತಿ ಪ್ರೊ| ಬಿ.ಕೆ ತುಳಸಿಮಾಲರವರು ಮಾತನಾಡಿ, ಮಹಿಳಾ ವಿವಿಯ ಹತ್ತೂಂಬತ್ತನೇ ವರ್ಷದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಈ ಭಾಗದ ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸಿಕೊಡಬೇಕು ಎಂಬ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತರಾಗಿದ್ದೇವೆ. ಶಾಸಕರು ನಮಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಶಾಸಕರ ಪ್ರೋತಾಹ ಸದಾಕಾಲವೂ ಇದ್ದೆ ಇದೆ. ಅವರು ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.
ವಿವಿಯ ಶೈಕ್ಷಣಿಕ ಸಲಹಾ ಸಮಿತಿ ಸದಸ್ಯೆ ಗುರಮ್ಮ ಸಿದ್ದಾರೆಡ್ಡಿ, ಡಿ.ಬಿ ಕಂಬಾರ್, ಪ್ರೊ | ಡಿ.ಎಂ. ಜ್ಯೋತಿ, ಡಾ| ಆರ್.ವಿ ಗಂಗಾಶೆಟ್ಟಿ, ಡಾ| ಬಸವರಾಜ ಪಾಟೀಲ್ ಅಷ್ಟೂರ, ವೆಂಕಟೇಶ ಬಡಿಗೇರ, ಪ್ರಕಾಶ ಬಡಿಗೇರ, ಪ್ರೊ | ಕಾಮಶೆಟ್ಟಿ, ಧನಶೆಟ್ಟಿ, ರಾಜಕುಮಾರ, ಧರ್ಮಣ್ಣ ಇದ್ದರು.