ಪುದುಚೆರಿ: ಓದಿನಲ್ಲಿ ಸದಾ ತನ್ನ ಮಗನೇ/ಮಗಳೇ ಪ್ರಥಮ ಸ್ಥಾನದಲ್ಲಿ ಬರಬೇಕೆಂಬ ಪೋಷಕರ ಅತಿಯಾಸೆ ಯಾವ ಮಟ್ಟದ ಕೃತ್ಯಕ್ಕೆ ಅವರನ್ನು ಇಳಿಸುತ್ತದೆ ಎಂಬುದಕ್ಕೆ ಪುದುಚೆರಿಯ ಘಟನೆಯೊಂದು ಸಾಕ್ಷಿಯಾಗಿದೆ.
ಕಾರೈಕಲ್‌ನಲ್ಲಿ ತನ್ನ ಮಗಳ ತರಗತಿಯಲ್ಲಿ ಶೈಕ್ಷಣಿಕ ಮತ್ತು ಪಠ್ಯೇತರ ವಿಷಯಗಳಲ್ಲಿ ಸದಾ ಉನ್ನತ ಸ್ಥಾನದಲ್ಲಿ ಇದ್ದ ಬಾಲಕನ್ನು 42 ವರ್ಷದ ಮಹಿಳೆ ವಿಷ ಉಣಿಸಿ ಕೊಲೆ ಮಾಡಿದ್ದಾಳೆ.
ಬಾಲಮಣಿಕಂಠನ್(13) ಮೃತ ಬಾಲಕ. ಆರೋಪಿ ಜೆ.ಸಗಾಯ್‌ರಾಣಿ ವಿಕ್ಟೋರಿಯಾ(42)ಳನ್ನು ಪೊಲೀಸರು ಬಂಧಿಸಿದ್ದಾರೆ.
“ಬಾಲಮಣಿಕಂಠನ್ ತರಗತಿಯಲ್ಲಿ ಸದಾ ಪ್ರಥಮ ಸ್ಥಾನ ಪಡೆಯುತ್ತಿದ್ದ. ಆರೋಪಿ ಮಹಿಳೆಯ ಮಗಳಿಗಿಂತ ಸದಾ ಮುಂದಿರುತ್ತಿದ್ದ. ಒಂದು ವೇಳೆ ಬಾಲಮಣಿಕಂಠನ್ ಇಲ್ಲದಿದ್ದರೆ ತನ್ನ ಮಗಳೇ ಎಲ್ಲದರಲ್ಲಿ ಪ್ರಥಮ ಬರುತ್ತಾಳೆ ಎಂದು ಭಾವಿಸಿ, ಬಾಲಕನನ್ನು ಕೊಲೆ ಮಾಡಲು ಮಹಿಳೆ ತೀರ್ಮಾನಿಸುತ್ತಾಳೆ,” ಎಂದು ಎಸ್‌ಪಿ ಆರ್.ಲೋಕೇಶ್ವರನ್ ಮಾಹಿತಿ ನೀಡಿದ್ದಾರೆ.
ಶಾಲೆಯ ವಾರ್ಷಿಕ ಸಮಾರಂಭದ ದಿನದಂದು ಶಾಲೆಗೆ ಆಗಮಿಸಿದ್ದ ಮಹಿಳೆ, ತಾನು ಬಾಲಮಣಿಕಂಠನ್ ತಾಯಿಯಂದು, ಈ ಎರಡು ಬಾಟಲ್‌ಗಳಲ್ಲಿರುವ ಪಾನೀಯವನ್ನು ಆತನಿಗೆ ನೀಡುವಂತೆ ಸೆಕ್ಯುರಿಟಿ ಗಾರ್ಡ್‌ಗೆ ನೀಡಿ ಹೋಗಿದ್ದಳು. ನಂತರ ಬಾಲಕ ಪಾನೀಯ ಸೇವಿಸಿದ್ದು, ಮನೆಗೆ ಬಂದ ನಂತರ ಅನಾರೋಗ್ಯಕ್ಕೆ ಒಳಗಾದ. ಮಣಿಕಂಠನ್ ತಾಯಿಗೆ ವಿಷಯ ತಿಳಿಸಿದ್ದಾನೆ.
ಜತೆಗೆ ಅವನನ್ನು ಆಸ್ಪತ್ರೆಗೆ ದಾಖಲಿಸಿದರೂ, ಆತ ಅಸುನೀಗಿದ್ದಾನೆ. ತನಿಖೆಯ ಬಳಿಕ ಕೃತ್ಯವೆಸಗಿದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಎಸ್.ಪಿ. ತಿಳಿಸಿದ್ದಾರೆ.