Advertisement
ಕ್ರೀಡೋಪಕರಣಗಳನ್ನು ಮಾರಿಕೊಂಡು, ಅಲ್ಪಸ್ವಲ್ಪ ಕ್ರಿಕೆಟ್ ಅಭ್ಯಾಸ ಮಾಡಿಕೊಂಡು ತನ್ನಪಾಡಿಗೆ ತಾನಿದ್ದ ಸೈಜು ಟೈಟಸ್ (36 ವರ್ಷ), ಮಾಮೂಲಿ ಆಟಗಾರರು ನಿವೃತ್ತಿಯಾಗುವ ವಯಸ್ಸಿನಲ್ಲಿ ಪುದುಚೇರಿ ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ! ಗುರುವಾರ ಬೆಳಗ್ಗೆ ಕೆಲಸಕ್ಕೆ ಹೊರಟಿದ್ದಾಗ ಕರೆ ಬಂದಿದೆ. ಗುರುವಾರ ಮಧ್ಯರಾತ್ರಿ 2.30ಕ್ಕೆ 2,400 ಕಿ.ಮೀ. ಪ್ರಯಾಣ ಮಾಡಿ ವಡೋದರ ತಲುಪಿದ್ದಾರೆ. ಶುಕ್ರವಾರ ಬೆಳಗ್ಗೆ ಉತ್ತರಾಖಂಡ ಪರ ಆಡಲಿಳಿದಿದ್ದಾರೆ. ಅದೂ ನಿದ್ರೆಯಿಲ್ಲದೇ!
ಬಿಸಿಸಿಐ ಈ ಬಾರಿ 9 ಹೊಸ ರಾಜ್ಯಗಳನ್ನು ದೇಶಿಯ ಕ್ರಿಕೆಟ್‌ನಲ್ಲಿ ಕಣಕ್ಕಿಳಿಸಿದೆ. ಆ ಪೈಕಿ ಪುದುಚೇರಿಯೂ ಒಂದು. ಆದರೆ ಈ ರಾಜ್ಯಗಳಲ್ಲಿ ಸ್ಥಳೀಯವಾಗಿ ಪ್ರತಿಭೆಗಳೇ ಇಲ್ಲ. ಅದೇ ಕಾರಣಕ್ಕೆ ಹೊರರಾಜ್ಯದ ಆಟಗಾರರನ್ನು ಅವಲಂಬಿಸಿ ಆಡುತ್ತಿವೆ. ಅದಕ್ಕೆ ಬಿಸಿಸಿಐ ವಿಶೇಷ ವಿನಾಯಿತಿಯನ್ನೂ ನೀಡಿದೆ. ಇಂತಹ ವಿನಾಯಿತಿಯನ್ನು ಸ್ವಲ್ಪ ಜಾಸ್ತಿಯೇ ಬಳಸಿಕೊಂಡ ಪುದುಚೇರಿ ತನ್ನ ತಂಡದಲ್ಲಿ ಹೊರರಾಜ್ಯದವರನ್ನೇ ಸೇರಿಸಿಕೊಂಡು ಮೊನ್ನೆ ಬುಧವಾರ ಮೊದಲ ಪಂದ್ಯವಾಡಿತು. ಇದು ರಾಜ್ಯ ಆಟಗಾರರಿಗೆ ಮಾಡುವ ಅನ್ಯಾಯ, ಬಿಸಿಸಿಐನ ಉದ್ದೇಶವನ್ನೇ ಪುದುಚೇರಿ ಕ್ರಿಕೆಟ್ ಸಂಸ್ಥೆ ಹಾಳು ಮಾಡಿದೆ ಎಂದು ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ ಬಿಸಿಸಿಐ 8 ಹೊರರಾಜ್ಯದ ಆಟಗಾರರ ಆಯ್ಕೆಯನ್ನು ರದ್ದುಗೊಳಿಸಿತು. ಬುಧವಾರ ಬಿಸಿಸಿಐ ಈ ನಿರ್ಧಾರ ಮಾಡಿತು. ಶುಕ್ರವಾರ 2ನೇ ಪಂದ್ಯ ಆಡಬೇಕಾಗಿದ್ದರಿಂದ ಪುದುಚೇರಿ ಕ್ರಿಕೆಟ್ ಸಂಸ್ಥೆ ಇಕ್ಕಟ್ಟಿಗೆ ಸಿಕ್ಕಿತು. ಬದಲೀ ಆಟಗಾರರೇ ಇಲ್ಲದ ಸ್ಥಿತಿಯಲ್ಲಿ ಅಲ್ಪಸ್ವಲ್ಪ ಕ್ರಿಕೆಟ್ ಗೊತ್ತಿದ್ದವರಿಗೆಲ್ಲ ಪದಾಧಿಕಾರಿಗಳು ಕರೆ ಮಾಡಿದರು. ಅಂತಹದ್ದೇ ಒಂದು ಗಳಿಗೆಯಲ್ಲಿ ಕರೆ ಹೋಗಿದ್ದು ಸೈಜು ಟೈಟಸ್, ವಿಕೆ°àಶ್ವರ್ ಶಿವಸಂಗರ್, ಸಾಜು ಚೋಥಾನ್, ಎ.ಎಂ. ನಾರಾಯಣನ್, ಮಗೇಂದ್ರನ್ ಚಿನ್ನದುರೈ, ರಂಜಿತ್ ಬಾಸ್ಕರನ್ ಅವರಿಗೆ. ಈ ಪೈಕಿ ಸೈಜು, ವಿಕೆ°àಶ್ವರ್, ನಾರಾಯಣನ್ ಆಡುವ ಅವಕಾಶವನ್ನೂ ಪಡೆದರು.
Related Articles
ಬುಧವಾರ ತಡರಾತ್ರಿ ಚೆನ್ನೈನಿಂದ ಸೈಜು ಹಿಂತಿರುಗಿದ್ದರು. ಗುರುವಾರ ಬೆಳಗ್ಗೆ ಕೂಡಲೇ ಹೊರಡಿ ಎಂದು ಕರೆ ಬಂದಿದ್ದರಿಂದ ಸಂಭ್ರಮವೋ, ಅಚ್ಚರಿಯೋ ಗೊತ್ತಾಗದ ಸ್ಥಿತಿಯಲ್ಲಿ ಸೈಜು ಬೆಂಗಳೂರಿಗೆ ಬಂದರು. ಅಲ್ಲಿಂದ ತತ್‌ಕ್ಷಣ ವಿಮಾನ ಸಿಗದೇ ತಡವಾಗಿ ಮುಂಬಯಿ ತಲುಪಿದರು. ಮುಂಬಯಿಯಿಂದ ವಡೋದರಕ್ಕೆ ಟ್ಯಾಕ್ಸಿ ಮಾಡಿಕೊಂಡು ತಲುಪಿದರು. ಇದು ಒಟ್ಟು 2,400 ಕಿ.ಮೀ. ದೂರದ ಪ್ರಯಾಣವಾಗಿತ್ತು. 8 ಗಂಟೆಗೆ ಮೈದಾನ ಮುಟ್ಟಿದಾಗ ಆಡುತ್ತೇನೋ, ಇಲ್ಲವೋ ಎನ್ನುವುದೂ ಸೈಜುಗೆ ಗೊತ್ತಿರಲಿಲ್ಲ!
Advertisement
ತಂಡದಲ್ಲಿ ಸ್ಥಾನ ಸಿಕ್ಕಿದಾಗ ಸೈಜು ಬಹಳ ಹೆದರಿದ್ದರಂತೆ. ಅದರಲ್ಲೂ ಅವರು ಬ್ಯಾಟಿಂಗ್‌ಗಿಳಿದಾಗ ಮತ್ತೂಂದು ತುದಿಯಲ್ಲಿ ಖ್ಯಾತ ಆಟಗಾರ ಅಭಿಷೇಕ್ ನಾಯರ್ ಆಡುತ್ತಿದ್ದರು. ಈ ಒತ್ತಡದಲ್ಲೂ ಸೈಜು 24 ಎಸೆತ ಎದುರಿಸಿ 10 ರನ್ ಮಾಡಿದರು. ಇದರ ಮಧ್ಯಯೇ ರನೌಟಾಗಿ ಹೊರಹೋಗುವ ಯತ್ನವನ್ನೂ ನಡೆಸಿದ್ದೆ ಎಂದು ಸೈಜು ಸಂಕೋಚದಿಂದ ಹೇಳಿಕೊಂಡಿದ್ದಾರೆ!