Advertisement

ಈಡೇರದ ಪುದು ಗ್ರಾ.ಪಂ. ಮೇಲ್ದರ್ಜೆಗೇರುವ ಪ್ರಸ್ತಾವ

09:31 PM Mar 04, 2021 | Team Udayavani |

ಬಂಟ್ವಾಳ: ಮಂಗಳೂರು ನಗರಕ್ಕೆ ಸಮೀಪದಲ್ಲಿದ್ದು, ದಿನೇ ದಿನೇ ನಗರ ಪ್ರದೇಶವಾಗಿ ಬೆಳೆಯುತ್ತಿರುವ ಫರಂಗಿ ಪೇಟೆಯನ್ನು ಒಳಗೊಂಡಿರುವ ಪುದು ಗ್ರಾ.ಪಂ.ನ್ನು ನಗರ ಸ್ಥಳೀಯಾಡಳಿತ ಸಂಸ್ಥೆ ಯಾಗಿ ಮೇಲ್ದರ್ಜೆಗೇರುವ ಪ್ರಸ್ತಾಪ ಹಲವು ಸಮಯಗಳಿಂದ ಸರಕಾರದ ಮುಂದಿದ್ದು, ಇನ್ನೂ ಕೂಡ ಅನುಷ್ಠಾನಗೊಂಡಿಲ್ಲ. ಕಳೆದ ವಿಧಾನಮಂಡಲ ಅಧಿವೇಶದಲ್ಲೂ ಇದೇ ವಿಚಾರ ಪ್ರಸ್ತಾಪವಾಗಿತ್ತು.

Advertisement

ಒಟ್ಟು  33  ಸದಸ್ಯ ಬಲವನ್ನು    ಹೊಂದಿರುವ ಗ್ರಾ.ಪಂ.ನ ಜನಸಂಖ್ಯೆಯು ಈಗಾಗಲೇ 13 ಸಾವಿರ ದಾಟಿದ್ದು, ಹೀಗಾಗಿ ಅಭಿವೃದ್ಧಿಯ ದೃಷ್ಟಿಯಿಂದ ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಆದರೆ ಕೆಲವೊಂದು ಕಾರಣಕ್ಕೆ ನಗರ ಸ್ಥಳೀಯಾಡಳಿತ ಸಂಸ್ಥೆಯಾಗಿ ಮೇಲ್ದರ್ಜೆಗೇರಿಸುವುದಕ್ಕೆ ವಿರೋಧಗಳು ಕೂಡ ಕೇಳಿ ಬರುತ್ತಿದೆ ಎನ್ನಲಾಗಿದೆ.

ತಾಲೂಕಿನ ಎಲ್ಲ ಗ್ರಾ.ಪಂ.ಗಳಿಗೆ ಕಳೆದ ಡಿಸೆಂಬರ್‌ನಲ್ಲಿ ಚುನಾವಣೆ ನಡೆದಿದ್ದರೆ, ಪುದು ಗ್ರಾ.ಪಂ.ಗೆ ಚುನಾವಣೆ ನಡೆದಿರಲಿಲ್ಲ. ಅಂದರೆ ಇಲ್ಲಿ ಈ ಹಿಂದೆ 2018ಕ್ಕೆ ಚುನಾವಣೆ ನಡೆದಿದ್ದು, ಹೀಗಾಗಿ ಹಾಲಿ ಆಡಳಿತ ಮಂಡಳಿಯ ಅವಧಿ 2023ಕ್ಕೆ ಪೂರ್ಣಗೊಳ್ಳುವುದರಿಂದ ಆ ಸಂದರ್ಭದಲ್ಲಿ ಪಟ್ಟಣ ಪಂಚಾಯತ್‌  ಆಗಿ ಮೇಲ್ದರ್ಜೆಗೇರಿ ಪಟ್ಟಣ  ಪಂಚಾಯತ್‌ಗೆ ಚುನಾವಣೆ ನಡೆಯುವ ಸಾಧ್ಯತೆಯೂ ಇದೆ.

ತಾ.ಪಂ., ಜಿ.ಪಂ. ಚುನಾವಣೆ :

ಪುದು ಗ್ರಾ.ಪಂ. ಮೇಲ್ದರ್ಜೆಗೇರುವ ಪ್ರಸ್ತಾವ ಸದ್ಯಕ್ಕೆ ಇಲ್ಲದೇ ಇರುವುದು ಹಾಗೂ ತಾ.ಪಂ.ಹಾಗೂ ಜಿ.ಪಂ.ಚುನಾವಣೆಗಳು ಶೀಘ್ರದಲ್ಲಿ ಬರಲಿರುವುದರಿಂದ ಈ ಚುನಾವಣೆಗಳು ನಡೆಯಲಿದೆ. ಆದರೆ ಮುಂದಿನ ಗ್ರಾ.ಪಂ.ಆಡಳಿತ ಮಂಡಳಿಯ ಚುನಾವಣೆ ಇದೆಯೇ ಅಥವಾ ಪ.ಪಂ.ಗೆ ಚುನಾವಣೆ ನಡೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Advertisement

ನಗರ ಸ್ಥಳೀಯಾಡಳಿತ  ಮೂರಕ್ಕೆ ಹಂಚಿಕೆ :

ಪುದು ಗ್ರಾ.ಪಂ. ಬಂಟ್ವಾಳ ತಾಲೂಕಿ ನಲ್ಲಿದ್ದರೂ, ಮಂಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಹಿಂದೆ ಪುದು, ತುಂಬೆ, ಮೇರಮಜಲು ಗ್ರಾ.ಪಂ.ಗಳನ್ನು ಉಳ್ಳಾಲ ತಾಲೂಕಿಗೆ ಸೇರಿಸಲಾ ಗುತ್ತದೆ ಎಂದು ಹೇಳಿದ್ದರೂ, ಬಳಿಕ ಈ ಮೂರನ್ನೂ ಉಳ್ಳಾಲದಿಂದ ಕೈಬಿಡಲಾಗಿತ್ತು. ಮುಂದೆ ಪುದು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿದರೆ ಬಂಟ್ವಾಳ ತಾಲೂಕಿನ ಮೂರನೇ ನಗರ ಸ್ಥಳೀಯಾಡಳಿತ ಸಂಸ್ಥೆ ಎನಿಸಿಕೊಳ್ಳಲಿದೆ.

ವಿಶೇಷವೆಂದರೆ ತಾಲೂಕಿನ ಬಂಟ್ವಾಳ ಪುರಸಭೆ ಬಂಟ್ವಾಳ ವಿ.ಸಭಾ ಕ್ಷೇತ್ರ, ವಿಟ್ಲ ಪ.ಪಂ.ಪುತ್ತೂರು ಕ್ಷೇತ್ರ ಹಾಗೂ ಪುದು ಪ.ಪಂ.ಮಂಗಳೂರು ಕ್ಷೇತ್ರಕ್ಕೆ ಹಂಚಿಕೆಯಾಗಲಿದೆ.

ಅಧಿವೇಶನದಲ್ಲಿ ಪ್ರಸ್ತಾವ :

ಕಳೆದ ಫೆಬ್ರವರಿಯಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್‌ ಸದಸ್ಯ ಕೆ.ಹರೀಶ್‌ಕುಮಾರ್‌ ಅವರು ಪುದು ಗ್ರಾಮ ಪಂಚಾಯತ್‌ಅನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಮೇಲ್ದರ್ಜೆಯ ಪ್ರಸ್ತಾವನೆ ಇದ್ದು, ಸರಕಾರ ಕ್ರಮಕೈಗೊಂಡಿಲ್ಲ ಎಂದು ಗಮನ ಸೆಳೆದಿದ್ದರು. ಇದಕ್ಕೆ ಪೂರಕವಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಹಮತ ವ್ಯಕ್ತಪಡಿಸಿದ್ದರು. ಹೀಗಾಗಿ ಆಡಳಿತ, ವಿರೋಧ ಪಕ್ಷಗಳು ಎರಡೂ ಭಾಗಗಳಿಂದಲೂ ಒತ್ತಡ ಇರುವುದರಿಂದ ಶೀಘ್ರದಲ್ಲಿ ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರುವ ಸಾಧ್ಯತೆಯೂ ಇದೆ.

ಪುದು ಗ್ರಾ.ಪಂ.ಮೇಲ್ದರ್ಜೆಗೇರಿಸುವ ಪ್ರಕ್ರಿಯೆಗೆ ಸಂಬಂಧಿಸಿ 2 ತಿಂಗಳ ಹಿಂದೆ ಗ್ರಾ.ಪಂ.ನಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆಯೊಂದನ್ನು ಕಳುಹಿಸಲಾಗಿದೆ. ಆದರೆ ಅಲ್ಲಿಂದ ಯಾವುದೇ ಮರುತ್ತರ ಬಂದಿಲ್ಲ. ಅದು ಸರಕಾರದ ಮಟ್ಟದ ತೀರ್ಮಾನವಾಗಿದೆ.  ಹರೀಶ್‌ ಕೆ.ಎ.,  ಅಭಿವೃದ್ಧಿ ಅಧಿಕಾರಿ, ಪುದು ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next