ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪಬ್ಲಿಕ್ ಟಿವಿ ಮುಖ್ಯಸ್ಥ ಹಾಗೂ ಹಿರಿಯ ಪತ್ರಕರ್ತ ರಂಗನಾಥ್ ಅವರ ವಿರುದ್ಧ ಹರಿಹಾಯ್ದಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆಲುವು ಸಾಧಿಸಿದ ಸದಸ್ಯರಿಗೆ ಗೌರವಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ನನ್ನ ಮೇಲೆ ಪಬ್ಲಿಕ್ ಟಿವಿ ವಾರ್ ಶುರು ಮಾಡಿದೆ. ವಾರ್ ಎದುರಿಸಲು ನಾನು ಸಿದ್ಧ. ಸುಳ್ಳು ಸುದ್ದಿ ಮಾಡ್ತೀರಾ…” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ರಂಗನಾಥ್, ಜನರ ದಾರಿ ತಪ್ಪಿಸಬೇಡಿ. ನಿಮಗೆ ಎಷ್ಟು ಗೊತ್ತಿದೆಯೋ ನನಗೂ ಅಷ್ಟೇ ಗೊತ್ತಿದೆ. ರೌಡಿಶೀಟರ್ ಇಟ್ಟುಕೊಂಡು ಪಬ್ಲಿಕ್ ಟಿವಿ ನಡೆಸುತ್ತಿದ್ದೀರಾ ರಂಗನಾಥ್?. ಅವರು ಪಂಥಾಹ್ವಾನ ಕೊಟ್ಟಿದ್ದಾರೆ. ನಾನು ಸ್ವೀಕರಿಸಿದ್ದೇನೆ. ಅದಕ್ಕೆ ನೇರವಾಗಿ ಮಾತನಾಡುತ್ತಿದ್ದೇನೆ. ನನ್ನ ತಂಟೆಗೆ ಬಂದರೆ ಹುಷಾರ್” ಎಂದು ಹೇಳಿದರು.
“ಒಂದು ಕಾಲದಲ್ಲಿ ಇಬ್ಬರೂ ಸ್ನೇಹಿತರಾಗಿದ್ದೆವು. ಒಟ್ಟಿಗೆ ಊಟ ಮಾಡಿದ್ದೇವು. ಇದೀಗ ಪಬ್ಲಿಕ್ ಟಿವಿ ರಂಗನಾಥ್ ನನ್ನ ಮೇಲೆ ಗದಾಪ್ರಹಾರ ಮಾಡುತ್ತಿದ್ದಾರೆ. ಮಾಧ್ಯಮಗಳನ್ನು ಮೆಚ್ಚಿಸಲು ನಾನು ಕೆಲಸ ಮಾಡುವುದಿಲ್ಲ. ಜನರು ನನಗೆ ಮುಖ್ಯ. ಒಂದು ವರ್ಷದಿಂದ ಮಾಧ್ಯಮಗಳು ಚಿತ್ರ ಹಿಂಸೆ ನೀಡುತ್ತಿವೆ. ಸರ್ಕಾರ ಈಗ ಬೀಳುತ್ತದೆ, ಆಗ ಬೀಳುತ್ತದೆ ಎನ್ನುತ್ತಿದ್ದಾರೆ. ಆದರೆ, ಮಾಧ್ಯಮಗಳ ಧಾರಾವಾಹಿಯಿಂದ ಸರ್ಕಾರ ಬೀಳುವುದಿಲ್ಲ’ ಎಂದು ಹೇಳಿದರು.
ಪಬ್ಲಿಕ್ ಟಿವಿಯಲ್ಲಿ ಬುಧವಾರ ಚರ್ಚೆ ವೇಳೆ ಬಳ್ಳಾರಿ ವಿವಿ ಪರೀಕ್ಷೆಯ ಪ್ರವೇಶ ಪತ್ರ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾಧ್ಯಮಗಳ ಮೇಲೆ ದಬ್ಟಾಳಿಕೆ ನಡೆಸುತ್ತಿದೆ. ಬಹಿರಂಗ ಚರ್ಚೆಗೆ ಮುಖ್ಯಮಂತ್ರಿಯವರು ಬರಬೇಕು ಎಂದು ರಂಗನಾಥ್ ಹೇಳಿದ್ದರು.