Advertisement
ಕಾರ್ಯಕರ್ತರಿಗೆ ಜವಾಬ್ದಾರಿ: ಸಂಘಟನೆ ಮತ್ತು ನಾಯಕತ್ವ ಒಟ್ಟೊಟ್ಟಿಗೆ ಹೋಗುತ್ತಿಲ್ಲ ಎಂಬುದೇ ಪಕ್ಷದಲ್ಲಿರುವ ಪ್ರಸ್ತುತ ಭಿನ್ನಮತಕ್ಕೆ ಪ್ರಮುಖ ಕಾರಣವಾಗಿತ್ತು. ಇದನ್ನು ಶಮನ ಮಾಡುವ ನಿಟ್ಟಿನಲ್ಲಿ ಪಕ್ಷ ಸಂಘಟನೆ, ಕೇಂದ್ರ ಸರಕಾರದ ಸಾಧನೆಗಳು, ರಾಜ್ಯ ಸರಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಲು ಸುಮಾರು 10,000 ವಿಸ್ತಾರಕರನ್ನು ನೇಮಿಸಲು ತೀರ್ಮಾನಿಸಲಾಗಿದೆ. ವಿಸ್ತಾರಕರಲ್ಲಿ ಸಂಸದರು, ಶಾಸಕರು ಮಾತ್ರವಲ್ಲದೆ, ಸ್ಥಳೀಯ ಮುಖಂಡರು, ಸಾಕಷ್ಟು ವರ್ಷಗಳಿಂದ ಪಕ್ಷ ಸಂಘಟನೆಗಾಗಿ ದುಡಿದವರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಅಲ್ಲದೆ ಪಕ್ಷದ ಮೂಲ ಕಾರ್ಯಕರ್ತರನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯವಾಗಿ ಪಕ್ಷ ಸಂಘಟನೆಗೆ ಕಾರ್ಯಕ್ರಮಗಳನ್ನು ರೂಪಿಸಲು ಕೂಡ ಕಾರ್ಯಕಾರಿಣಿ ಯಲ್ಲಿ ಜಿಲ್ಲಾ ಘಟಕಗಳಿಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೂದಿ ಮುಚ್ಚಿದ ಕೆಂಡ
ಆದರೆ ನಾವೆಲ್ಲ ಒಟ್ಟಾಗಿದ್ದೇವೆ, ಒಗ್ಗಟ್ಟಿನಿಂದ ಇದ್ದೇವೆ ಎಂದು ಮುಖಂಡರು ಪದೇ ಪದೆ ಹೇಳುತ್ತಿದ್ದರೂ ಪರಿಸ್ಥಿತಿ ಮಾತ್ರ ಇನ್ನೂ ಬೂದಿಮುಚ್ಚಿದ ಕೆಂಡದಂತೆಯೇ ಉಳಿದುಕೊಂಡಿದೆ. ಪಕ್ಷದ ಮುಖಂಡರು ಪ್ರತ್ಯೇಕ ಗುಂಪುಗಳಲ್ಲಿ ಗುರುತಿಸಿಕೊಂಡು ಕಾರ್ಯಕಾರಿಣಿಯಲ್ಲಿ ಕಾಲ ಕಳೆದಿರುವುದನ್ನು ಗಮನಿಸಿದಾಗ ಇನ್ನೂ ಎಲ್ಲವೂ ಸರಿಹೋಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದರ ನಡುವೆಯೂ ಯಡಿಯೂರಪ್ಪ ಅವರು ಮುಂದಿನ ದಿನಗಳಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಮುನ್ಸೂಚನೆ ನೀಡಿದ್ದಾರೆ. ನಮ್ಮ ಗುರಿ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ 150 ಸೀಟು ಗೆಲ್ಲು ವುದು. ಅದಕ್ಕಾಗಿ ನಮಗೆ ನಾವೇ ನಿರ್ಬಂಧ ಹಾಕಿಕೊಳ್ಳಬೇಕು. ಸಂಘಟನೆಯನ್ನು ಉಳಿಸುವ ಕೆಲಸವನ್ನು ನೀವು, ನಾವು ಸೇರಿ ಮಾಡಬೇಕು ಎಂದು ತನ್ನ ಸಮಾರೋಪ ಭಾಷಣದಲ್ಲಿ ಹೇಳಿದರು. ಮೆತ್ತಗಾದ ಬಿಎಸ್‌ವೈ, ಈಶ್ವರಪ್ಪ: ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಮುನಿಸು ಸ್ವಲ್ಪ ಮೆತ್ತಗಾದಂತೆ ಕಾರ್ಯಕಾರಿಣಿಯ 2ನೇ ದಿನ ಕಾಣಿಸಿತು. ಯಡಿಯೂರಪ್ಪ ರವಿವಾರ ತನ್ನ ಭಾಷಣದಲ್ಲಿ 2 ಬಾರಿ ನಮ್ಮ ನಾಯಕ ಈಶ್ವರಪ್ಪ ಎಂದು ಹೇಳಿದ್ದಾರೆ. ತನ್ನ ಭಾಷಣದಲ್ಲಿ 3 ಬಾರಿ ನಮ್ಮ ಸಿಎಂ ಅಭ್ಯರ್ಥಿ ಯಡಿಯೂರಪ್ಪ ಎಂದು ಈಶ್ವರಪ್ಪ ಹೇಳಿದ್ದಾರೆ. ಅಷ್ಟರ ಮಟ್ಟಿಗೆ ಕಾರ್ಯಕಾರಿಣಿ ಇಬ್ಬರ ಮಧ್ಯೆ ತೇಪೆ ಹಚ್ಚುವ ಕೆಲಸ ಮಾಡಿದೆ.
Related Articles
Advertisement
ಅಪಸ್ವರದ ಬಾಯಿ ಮುಚ್ಚಿಸಿದ ಯಡಿಯೂರಪ್ಪ ಯಡಿಯೂರಪ್ಪ ಅವರ ಕೆಂಗಣ್ಣಿಗೆ ಗುರಿಯಾಗಿರುವ ರಾಷ್ಟ್ರೀಯ ಜಂಟಿ ಸಹ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಅವರು ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ ಜನ್ಮ ಶತಾಬ್ದ ಕಾರ್ಯಕ್ರಮಗಳ ಗೋಷ್ಠಿಯಲ್ಲಿ ನಿರ್ಣಯ ಮಂಡಿಸುತ್ತಾ ಪ್ರತಿಯೊಬ್ಬ ಶಾಸಕ, ಸಂಸದರು ಸಹಿತ ಮುಖಂಡರು, ಕಾರ್ಯಕರ್ತರು ತಮ್ಮ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರಗಳಲ್ಲಿ ವಿಸ್ತಾರಕರಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದಾಗ ಸಭೆಯಲ್ಲಿ ಗುಸುಗುಸು ಜೋರಾಗಿ ತಮ್ಮೊಳಗೇ ಅತೃಪ್ತಿ ಹೇಳಿಕೊಳ್ಳುತ್ತಿದ್ದರು. ಮಧ್ಯಪ್ರವೇಶಿಸಿದ ಯಡಿಯೂರಪ್ಪ ಅವರು ಕೈಸನ್ನೆ ಮೂಲಕ ಬಾಯಿ ಮುಚ್ಚುವಂತೆ ಎಚ್ಚರಿಕೆ ನೀಡಿದ್ದರಿಂದ ಎಲ್ಲರೂ ಸುಮ್ಮನಾದರು. ವರಿಷ್ಠರಿಂದ ಬಂದಿತ್ತೇ ಸೂಚನೆ?: ರಾಜ್ಯಾದ್ಯಂತ 10 ಸಾವಿರ ವಿಸ್ತಾರಕರ ನೇಮಕ ಮತ್ತು ಸ್ಥಳೀಯವಾಗಿ ಪಕ್ಷ ಸಂಘಟನೆಗೆ ಕಾರ್ಯಕ್ರಮಗಳನ್ನು ರೂಪಿಸುವುದು, ಬರ ಪರಿಸ್ಥಿತಿ ಅಧ್ಯಯನಕ್ಕೆ ತೆರಳುವ ಯಡಿಯೂರಪ್ಪ ಅವರು ಇತರ ಎಲ್ಲ ಮುಖಂಡರನ್ನು ಒಟ್ಟಾಗಿ ಕರೆದೊಯ್ಯುವ ಯೋಜನೆಗಳು ವರಿಷ್ಠರಿಂದ ನಿರ್ದೇಶಿತಗೊಂಡಿತ್ತೇ? ಹೌದು ಎನ್ನುತ್ತವೆ ಪಕ್ಷದ ಮೂಲಗಳು.