ಬೆಂಗಳೂರು: 2019-20ರ ಶೈಕ್ಷಣಿಕ ವರ್ಷದಿಂದಲೇ ಏಳನೆಯ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಸಭಾಂಗಣದಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ಕುಮಾರ್, ಮಕ್ಕಳಿಗೆ ಪಬ್ಲಿಕ್ ಪರೀಕ್ಷೆಯ ಅನುಭವಕ್ಕಾಗಿ ಈ ಬಾರಿ ಪರೀಕ್ಷೆ ನಡೆಸಲಾಗುತ್ತದೆ. ಆದರೆ ಯಾರನ್ನೂ ಫೇಲ್ ಮಾಡುವುದಿಲ್ಲ.
ಆದರೆ, ಮುಂದಿನ ಶೈಕ್ಷಣಿಕ ವರ್ಷದಿಂದ ಪಬ್ಲಿಕ್ ಪರೀಕ್ಷೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ವರ್ಷದ ಪ್ರಾರಂಭದಿಂದಲೇ ಮಕ್ಕಳನ್ನು ತಯಾರು ಮಾಡಲಾಗುವುದು ಎಂದರು. ಮಕ್ಕಳ ಶೈಕ್ಷಣಿಕ ಮತ್ತು ಕಲಿಕಾ ಗುಣಮಟ್ಟ ಕಾಪಾಡುವ ದೃಷ್ಟಿಯಿಂದ ಪಬ್ಲಿಕ್ ಪರೀಕ್ಷೆಯನ್ನು ಮರು ಪರಿಚಯಿಸಲಾಗುತ್ತಿದೆ. 15 ವರ್ಷಗಳಿಂದ ಪಬ್ಲಿಕ್ ಪರೀಕ್ಷೆಗಳನ್ನು ರದ್ದುಪಡಿಸಿರುವ ಕಾರಣ, ಕಲಿಕಾ ಗುಣಮಟ್ಟ ಕುಸಿದಿದೆ. ಹೀಗಾಗಿ, ಈ ವರ್ಷದಿಂದಲೇ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಸರ್ಕಾರಕ್ಕೆ ಪೋಷಕರು, ಶಿಕ್ಷಕರು ಸಲಹೆ ನೀಡಿದ್ದಾರೆ.
7 ನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಎಸ್‌ಎಸ್‌ಎಲ್‌ಸಿ ಬೋರ್ಡ್ ತಯಾರು ಮಾಡಲಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಆಯಾ ಜಿಲ್ಲಾ ಮಟ್ಟದಲ್ಲೇ ನಡೆಸಲು ತೀರ್ಮಾನಿಸಿರುವುದಾಗಿ ತಿಳಿಸಿದರು. ಮಾರ್ಚ್ ನಲ್ಲಿ ಪಬ್ಲಿಕ್ ಪರೀಕ್ಷೆ ನಡೆಯಲಿದ್ದು, ಪ್ರಶ್ನೆ ಪತ್ರಿಕೆ ಮಾದರಿ ಹೇಗೆ ಇರುತ್ತದೆ ಎಂಬ ಕುರಿತು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಇದಕ್ಕಾಗಿ ಸಮಿತಿ ರಚನೆ ಮಾಡಿ ಸಲಹೆ ತೆಗೆದುಕೊಂಡು ನಂತರ ಮಾದರಿ ಪ್ರಶ್ನೆ ಪತ್ರಿಕೆ ಮಾಡಲಾಗುತ್ತದೆ ಎಂದರು.
ಬ್ಯಾಗ್ ರಹಿತ ದಿನ ಜಾರಿಗೆ ಸಿದ್ಧತೆ: ಮಕ್ಕಳಿಗೆ ಕಲಿಕೆ ವಾತಾವರಣ ಮತ್ತಷ್ಟು ವಿದ್ಯಾರ್ಥಿ ಸ್ನೇಹಿಯಾಗಿರಬೇಕು ಎಂಬ ಕಾರಣಕ್ಕೆ ತಿಂಗಳಲ್ಲಿ ಒಂದು ಶನಿವಾರ ಬ್ಯಾಗ್ ರಹಿತ ದಿನವಾಗಿ ಘೋಷಿಸಲು ಸಿದ್ಧತೆ ನಡೆದಿದೆ. ಇದಕ್ಕಾಗಿ ಎನ್‌ಜಿಒ ಸಂಸ್ಥೆಯೊಂದು ನವೆಂಬರ್ 2ಕ್ಕೆ ಬ್ಯಾಗ್ ರಹಿತ ದಿನ ಹೇಗೆ ಕಲಿಕೆಗೆ ಸಹಾಯಕವಾಗಲಿದೆ ಎಂಬ ಪ್ರಾಯೋಗಿಕ ಪ್ರದರ್ಶನ ತೋರಿಸಲಿದೆ. ನಂತರ ಇದರ ಸಾಧಕ ಬಾಧಕಗಳನ್ನು ಚರ್ಚಿಸಿ ಶೀಘ್ರ ಬ್ಯಾಗ್ ರಹಿತ ದಿನ ಘೋಷಣೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.