ಕಲಬುರಗಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗೆಗಿನ ಭಯ ಹೋಗಲಾಡಿಸಲು ಹಾಗೂ ಶಿಕ್ಷಣದಲ್ಲಿ ಗುಣಮಟ್ಟ ತರುವ ನಿಟ್ಟಿನಲ್ಲಿ ಆರನೇ ಇಲ್ಲವೇ ಎಂಟನೇ ತರಗತಿಗೆ ಪಬ್ಲಿಕ್ ಪರೀಕ್ಷೆಯನ್ನು ಕಾರ್ಯರೂಪಕ್ಕೆ ತರಲು ಚಿಂತನೆ ನಡೆದಿದೆ ಎಂದು ಸಚಿವ ಎಸ್.ಸುರೇಶಕುಮಾರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಮೊದಲು ಏಳನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಅಳವಡಿಸಲಾಗಿತ್ತು.
ಈಗ ಪ್ರಾಥಮಿಕ ಹಂತದಲ್ಲಿ ಇಲ್ಲವೇ ಪ್ರೌಢಹಂತದಲ್ಲಿ ಎಸ್‌ಎಸ್‌ಎಲ್‌ಸಿಗೂ ಮುಂಚೆ ಮಗದೊಂದು ಪಬ್ಲಿಕ್ (ಪರೀಕ್ಷಾ ಮಂಡಳಿ) ಪರೀಕ್ಷೆ ಅಳವಡಿಸುವ ಕುರಿತು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ಕುರಿತು ವಿಮರ್ಶೆ ಹಾಗೂ ಚಿಂತನೆ ನಡೆಯುತ್ತಿದೆ ಎಂದರು.
ಸಿಎಂ ಜತೆ ಚರ್ಚೆ: ಕಲ್ಯಾಣ ಕರ್ನಾಟಕ ಭಾಗದಲ್ಲೇ ಹೆಚ್ಚಿನ ಶಿಕ್ಷಕ ಹುದ್ದೆಗಳು ಖಾಲಿ ಇವೆ. ಶಿಕ್ಷಕರ ಹುದ್ದೆಗಳ ಭರ್ತಿ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು. ಶೈಕ್ಷಣಿಕ ಸಮಸ್ಯೆಗಳನ್ನು ಅರಿಯಲು ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಖಾಸಗಿ ಸೇವೆಗೆ ಕ್ರಮ: ಸರ್ಕಾರಿ ಶಾಲಾ ಶಿಕ್ಷಕರು ಶಿಕ್ಷಣ ಸಂಸ್ಥೆ ಹಾಗೂ ಇತರ ಸಂಸ್ಥೆಗಳನ್ನು ನಡೆಸುತ್ತಿದ್ದರೆ ಕ್ರಮ ಕೈಗೊಳ್ಳಲಾಗುವುದು. ಶಾಲೆ ಬಿಟ್ಟು ಖಾಸಗಿಯಾಗಿ ಕಲಿಸಿದರೆ ಅದು ಮಾರಕವಾಗುತ್ತದೆ. ಕ್ರಮಕ್ಕೆ ಮುಂದಾಗುವ ಮುನ್ನ ಶಿಕ್ಷಕರು ಸುಧಾರಣೆಯತ್ತ ಹೆಜ್ಜೆ ಹಾಕಬೇಕು ಎಂದರು.
ಸರ್ಕಾರಿ ಶಾಲಾ ಮಕ್ಕಳಿಗೆ ಬೆಳಗಿನ ಉಪಾಹಾರ ನೀಡಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ಈಗ ನೀಡಲಾಗುತ್ತಿರುವ ಹಾಲನ್ನು ಮತ್ತಷ್ಟು ಉತೃಷ್ಟಗೊಳಿಸಲಾಗುತ್ತಿದೆ. ಉಪಹಾರ ನೀಡುವ ಕುರಿತು ಅಧ್ಯಯನ ನಡೆಸಲಾಗುವುದು. ಆದರೆ, ಪಿಯುಸಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಬಗ್ಗೆ ಸಮಾಲೋಚನೆ ನಡೆದಿದೆ ಎಂದರು.