ಕೆ.ಆರ್.ಪುರ: ಕ್ರಿಶ್ಚಿಯನ್ ಸಂಘಟನೆಯೊಂದರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಇಬ್ಬರು ಮಹಿಳೆಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ವಾಲೆಂಟೈನ್ ಡಿಸಿಲ್ವಾ ಬಂಧಿತ ಆರೋಪಿ. ಈಕೆಯ ಜತೆ ಸೇರಿ ವಂಚಿಸುತ್ತಿದ್ದ ಪೂಜಾ ಭಗವತಿಗಾಗಿ ಪೊಲೀಸ್ರು ಹುಡುಕಾಟ ನಡೆಸುತ್ತಿದ್ದಾರೆ. ಈ ಮಹಿಳೆಯರು ಕ್ರಿಶ್ಚಿಯನ್ ಸಂಘಟನೆಯೊಂದರ ಹೆಸರು ಹೇಳಿಕೊಂಡು, ಸಂಘಟನೆಗೆ ವಿದೇಶದಿಂದ ಅಪಾರ ಪ್ರಮಾಣದಲ್ಲಿ ದೇಣಿಗೆ ಬರುತ್ತಿದೆ.
ಆ ಹಣ ಬಳಸಿಕೊಂಡು ತೀರಾ ಕಡಿಮೆ ಬೆಲೆಗೆ ಹೊಸ ಕಾರು, ಬೈಕ್ ಹಾಗೂ ವಿಲ್ಲಾಗಳನ್ನು ಕೊಡಿಸುವುದಾಗಿ ನಂಬಿಸಿ, ನೂರಾರು ಜನರಿಂದ ಕೋಟ್ಯಂತರ ರೂ. ಪಡೆದು ವಂಚನೆ ಮಾಡುತ್ತಿದ್ದರು. ನಗರದ ಹಲಸೂರು, ಬಾಣಸವಾಡಿ, ರಾಮಮೂರ್ತಿ ನಗರ, ಮಹದೇವಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಆರೋಪಿಗಳು ಅಮಾಯಕ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿದ್ದಾರೆ.
ಆರೋಪಿಗಳ ವಿರುದ್ಧ ಈ ಮೊದಲೇ ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ದೂರು ಕೂಡ ದಾಖಲಾಗಿತ್ತು. ಆಕರ್ಷಕ ಕೊಡುಗೆಗಳನ್ನು ನೀಡುವುದಾಗಿ ನಂಬಿಸುತ್ತಿದ್ದ ವಾಲೆಂಟೈನ್ ಡಿಸಿಲ್ವಾ ಹಾಗೂ ಪೂಜಾ ಭಗವತಿ, ಜನರಿಂದ ಹಣ ಪಡೆದ ನಂತರ ಒಂದು ಚಿನ್ನದ ನಾಣ್ಯ ಕೊಟ್ಟು ನಂತರ ಅವರ ಕಣ್ಣಿಗೆ ಬೀಳದೆ ತಿರುಗಾಡುತ್ತಿದ್ದರು.
ಹಣ ಕೊಟ್ಟವರು ಈ ಬಗ್ಗೆ ಪ್ರಶ್ನಿಸಿದರೆ, “ನೀವು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದೀರ ಎಂದು ನಿಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇವೆ’ ಎಂದು ಬೆದರಿಸುತ್ತಿದ್ದರು. ನಿನ್ನೆ ಸಾರ್ವಜನಿಕರು ವಾಲೆಂಟೈನ್ ಡಿಸಿಲ್ವಾಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಮಹದೇವಪುರ ಠಾಣೆ ಪೊಲೀಸರು, ತಲೆಮರಿಸಿಕೊಂಡಿರುವ ಮತ್ತೋರ್ವ ಆರೋಪಿ ಪೂಜಾ ಭಗವತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.