Advertisement
ಬಹುತೇಕ ಎಲ್ಲ ಹೊಸ ನಿಲ್ದಾಣಗಳಲ್ಲಿ ಎಲ್‌ಇಡಿ ಟಿವಿಗಳ ಮೂಲಕ ಉದ್ಘಾಟನಾ ಕಾರ್ಯಕ್ರಮದ ನೇರ ಪ್ರಸಾರ ವ್ಯವಸ್ಥೆ ಇತ್ತು. ಅತ್ತ ಚಾಲನೆ ನೀಡುತ್ತಿದ್ದಂತೆ ಇತ್ತ ಬಿಎಂಆರ್‌ಸಿ ಸಿಬ್ಬಂದಿ, ಗಣ್ಯರು, ವಿವಿಐಪಿ ಪಾಸುಗಳನ್ನು ಹಿಡಿದು ಬಂದವರಿಂದ ಕರತಾಡನ ಮೊಳಗಿದವು.
ಸಿಂಗಾರಗೊಂಡಿದ್ದ ಹಸಿರು ರೈಲು ಸಂಪಿಗೆರಸ್ತೆಯ ಮಂತ್ರಿಸ್ಕ್ವೇರ್‌ನಿಂದ ಹೊರಟು, 45 ನಿಮಿಷಗಳಲ್ಲಿ ಯಲಚೇನಹಳ್ಳಿ ತಲುಪಿತು. ಕನ್ನಡಿಗ ಶಾಂತರಾಜ ಮೊದಲ ಹಂತದ ಮೊದಲ ರೈಲು ಓಡಿಸಿದರು. ಇನ್ನು ಆ ರೈಲಿನ ಮೊದಲ ಪ್ರಯಾಣಿಕ ಮಲ್ಲೇಶ್ವರದ ಎಸ್.ವಿ.ಎಸ್. ರಾವ್. ರೈಲು ಹೊರಟ ಮಾರ್ಗದುದ್ದಕ್ಕೂ ಬರುವ ಎಲ್ಲ 12 ನಿಲ್ದಾಣಗಳಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ನಿಲ್ದಾಣದ ಸಮೀಪ ಬರುತ್ತಿರುವ ಮೆಟ್ರೋ ರೈಲನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಳ್ಳುವ ಉತ್ಸಾಹ, ರೈಲಿನೊಂದಿಗೆ ಸ್ನೇಹಿತರ ಸೆಲ್ಫಿಗಳು, ಬಂದು ನಿಂತ ರೈಲಿನ ಮುಂದೆ ಬಿಎಂಆರ್‌ಸಿ ತಂಡದ ವಿಕ್ಟರಿ ಪೋಜು ನೀಡುವ ಮೂಲಕ ಜನ ಸಂಭ್ರಮಪಟ್ಟರು.
Related Articles
Advertisement
ಈ ಸಂದರ್ಭದಲ್ಲಿ ಮೆಟ್ರೋಗಾಗಿ ಕಾದು ವಾಪಸ್ಸಾಗುತ್ತಿದ್ದ ಜಯನಗರದ ನಿವಾಸಿ ಮಹೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲ ದಿನವೇ ಮೆಟ್ರೋದಲ್ಲಿ ಪ್ರಯಾಣಿಸಬೇಕು ಎಂಬ ಆಸೆಯಿಂದ ಬಂದೆವು. ಆದರೆ, ಪಾಸುಗಳನ್ನು ಹೊಂದಿದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಸಿಕ್ಕಿತು. ಭಾನುವಾರ ಸಂಜೆ ಮೊದಲ ಟ್ರಿಪ್‌ನಲ್ಲೇ ಪ್ರಯಾಣ ಬೆಳೆಸುತ್ತೇನೆ ಎಂದು ಹೇಳಿದರು.
ಇಂದು ಸಾರ್ವಜನಿಕ ಸಂಚಾರ: ರಾಷ್ಟ್ರಪತಿಗಳಿಂದ ಉದ್ಘಾಟನೆಗೊಂಡ “ನಮ್ಮ ಮೆಟ್ರೋ’ ಪೂರ್ಣ ಹಂತದ ಸಾರ್ವಜನಿಕ ಸಂಚಾರ ಸೇವೆ ಭಾನುವಾರ ಸಂಜೆ 4ರಿಂದ ಆರಂಭವಾಗಲಿದೆ. ಸಂಜೆ 4ಕ್ಕೆ ಸಂಪಿಗೆರಸ್ತೆಯ ಮಂತ್ರಿಸ್ಕ್ವೇರ್‌ನಿಂದ ಕಾರ್ಯಾಚರಣೆ ಆರಂಭಗೊಳ್ಳಲಿದೆ. ಅದೇ ರೀತಿ, ಯಲಚೇನಹಳ್ಳಿಯಿಂದಲೂ ಸಾರ್ವಜನಿಕ ಸೇವೆ ಶುರುವಾಗಲಿದೆ ಎಂದು ಬಿಎಂಆರ್‌ಸಿ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರಿಗೆ ಉಚಿತ ಸಂಚಾರ: ಮೆಟ್ರೋ ರೈಲಿನಲ್ಲಿ ಭಾನುವಾರ ಪೊಲೀಸರಿಗೆ ಕುಟುಂಬ ಸದಸ್ಯರೊಂದಿಗೆ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮೊದಲ ಹಂತದ ಮೆಟ್ರೋ ನಿರ್ಮಾಣ ಮತ್ತು ಉದ್ಘಾಟನಾ ಸಮಾರಂಭಗಳ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕುಟುಂಬ ಸದಸ್ಯರೊಂದಿಗೆ ಭಾನುವಾರ ಉಚಿತವಾಗಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್ ಖರೋಲಾ ಸ್ಪಷ್ಟಪಡಿಸಿದ್ದಾರೆ.