ಸುರತ್ಕಲ್: ಪೊಲೀಸ್ ಇಲಾಖೆಯಲ್ಲಿ ಸಿಬಂದಿ ಕೊರತೆಯಿದ್ದು, ಪಬ್ಲಿಕ್ ಅನೌನ್ಸ್ ಸಿಸ್ಟಮ್ ಅಳವಡಿಕೆಯಿಂದ ಪರಿಣಾಮಕಾರಿಯಾಗಿ ಸಂಚಾರ ವ್ಯವಸ್ಥೆ ನಿರ್ವಹಿಸಲು ಪ್ರಯೋಜನವಾಗಲಿದೆ ಎಂದು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಹೇಳಿದರು.
ಸುರತ್ಕಲ್‌ನಲ್ಲಿ ಬಿಬ್ಲಿಯೋಸ್ ಬುಕ್ ಪಾಯಿಂಟ್ ಮಾಲಕ ಪ್ರದೀಪ್, ರಮೇಶ್ ರಾವ್ ಮತ್ತು ಗೋವಿಂದದಾಸ ಶಿಕ್ಷಕ ರಕ್ಷಕ ಸಂಘ ಕೊಡುಗೆಯಾಗಿ ನೀಡಿದ ಸಾರ್ವಜನಿಕ ಸಂದೇಶ ಕೊಠಡಿ (ಪಿಎ)ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರಿನಲ್ಲಿ ಸಂಚಾರ ಸಮಸ್ಯೆಯಿದ್ದು, ನಿರ್ವಹಣೆಗೆ ಹೆಚ್ಚು ಸಿಬಂದಿ ಅಗತ್ಯವಿದೆ. ಸಾರ್ವಜನಿಕ ಸಂದೇಶ ಕೊಠಡಿಗಳನ್ನು ರಾಜ್ಯದ ಇತರೆಡೆ ಅಳವಡಿಸಿಕೊಳ್ಳಲಾಗಿದೆ. ಈಗ ಸುರತ್ಕಲ್‌ನಲ್ಲಿ ಸಾರ್ವಜನಿಕರ ಭಾಗೀದಾರಿಕೆಯಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ನಗರದ ವಿವಿಧೆಡೆ ಸ್ಥಾಪಿಸುವ ಯೋಜನೆಯಿದೆ ಎಂದರು. ಮಂಗಳೂರು ಉತ್ತರ ಸಂಚಾರ ಠಾಣೆಯ ಸಿ.ಐ. ಮಂಜುನಾಥ್ ಅವರ ಸಂಚಾರ ಕಾರ್ಯ ಯೋಜನೆಯನ್ನು ಆಯುಕ್ತರು ಶ್ಲಾಘಿಸಿದರು.
ಸಹಾಯಕ ಪೊಲೀಸ್ ಆಯುಕ್ತ (ಕಾನೂನು ಸುವ್ಯವಸ್ಥೆ) ಹನುಮಂತರಾಯ, ಉಮಾ ಪ್ರಶಾಂತ್, ಸಂಚಾರ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ, ಸುರತ್ಕಲ್ ಟ್ರಾಫಿಕ್ ವಿಭಾಗ ಸಿಐ ಮಂಜುನಾಥ್, ಸುರತ್ಕಲ್ ಇನ್‌ಸ್ಪೆಕ್ಟರ್ ಚೆಲುವರಾಜ್, ಸುರತ್ಕಲ್ ನಾಗರಿಕ ಸಲಹಾ ಸಮಿತಿ ಸಂಚಾಲಕ ರಾಜ್ ಮೋಹನ್‌ರಾವ್, ಶಿಕ್ಷಕ ರಕ್ಷಕ ಸಂಘದ ಗಂಗಾಧರ ಪೂಜಾರಿ, ಬಿಬ್ಲಿಯೋಸ್ ಮಾಲಕ ಪ್ರದೀಪ್, ರಮೇಶ್ ರಾವ್, ರೋಟರಿ ಸಹಾಯಕ ಗವರ್ನರ್ ನವೀನ್ ಕುಮಾರ್, ಪ್ರೊ| ಕೃಷ್ಣಮೂರ್ತಿ, ರಿಕ್ಷಾ ಚಾಲಕ ಮಾಲಕ, ಟೆಂಪೊ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು, ರೋಟರಿ ಸದಸ್ಯರು ಉಪಸ್ಥಿತರಿದ್ದರು.