Advertisement

ಫ್ಲೈ ಓವರ್‌ ಬೇಗ ಮುಗಿಸದಿದ್ದರೆ ಟೋಲ್‌ಗೆ ಮುತ್ತಿಗೆ

10:07 AM Aug 10, 2018 | Team Udayavani |

ಕುಂದಾಪುರ: ವರ್ಷಗಳಿಂದ ಮಳೆ ಕಾರಣ ಹೇಳುತ್ತ ಹೆದ್ದಾರಿ ಕಾಮಗಾರಿ ಮುಗಿಸಿಲ್ಲ. ಟೋಲ್‌ಗೆ ಮುತ್ತಿಗೆ ಹಾಕಿ ಆದಾಯ ನಿಲ್ಲಿಸಿದರೆ ಗುತ್ತಿಗೆದಾರ ಕಂಪೆನಿಗೆ ಬುದ್ಧಿ ಬಂದೇ ಬರುತ್ತದೆ! ಇದು ಜನರ ಆಕ್ರೋಶದ ನುಡಿ. ಕುಂದಾಪುರ ತಾ.ಪಂ.  ಸಭಾಂಗಣದಲ್ಲಿ ಗುರುವಾರ ಸಹಾಯಕ ಕಮಿಷನರ್‌ ಟಿ. ಭೂಬಾಲನ್‌ ಅಧ್ಯಕ್ಷತೆಯಲ್ಲಿ ನಡೆದ ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷಾ ಸಮಾಲೋಚನೆ ಸಭೆಯಲ್ಲಿ ರಾ. ಹೆದ್ದಾರಿ ಕಾಮಗಾರಿ ಅವ್ಯವಸ್ಥೆಗೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಯಿತು.  

Advertisement

ಪಾರ್ಕಿಂಗ್‌
ನಗರದಲ್ಲಿ ಪಾರ್ಕಿಂಗ್‌ ಸಮಸ್ಯೆ ಇದೆ. ಪಾರ್ಕಿಂಗ್‌ಗೆ ಜಾಗ ಗುರುತಿಸದೆ ದಂಡ ವಿಧಿಸಲಾಗುತ್ತಿದೆ.  ಅಂಗಡಿ ಎದುರು ನಿಲ್ಲಿಸಿದ ವಾಹನಗಳಿಗೆ ದಂಡ, ಪಾರ್ಕಿಂಗ್‌ ಸ್ಥಳ ಮೀಸಲಿಡದೆ ಕಟ್ಟಡ ನಿರ್ಮಿಸಿದವರಿಗೆ ದಂಡವಿಲ್ಲ ಎಂಬ ಸ್ಥಿತಿ ಇದೆ ಎಂದು ರಿಕ್ಷಾ ಚಾಲಕರು ದೂರಿದರು. ಪಾವತಿ ಪಾರ್ಕಿಂಗ್‌ ವ್ಯವಸ್ಥೆ ರೂಪಿಸಿ ಎನ್ನುವ ಸಲಹೆ ಬಂತು. ಇದಕ್ಕೆ ಉತ್ತರಿಸಿದ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಜೂನಿಯರ್‌ ಕಾಲೇಜು ಬಳಿ ಜಾಗವೂ ಇದೆ. ಎಸಿಯವರು ಅನುವು ಮಾಡಿಕೊಟ್ಟಲ್ಲಿ ಯೋಜನೆ ರೂಪಿಸಲಾಗುವುದು ಎಂದರು.  

ಬಸ್ಸುಗಳ ಗೊಂದಲ
ಕೆಎಸ್‌ಆರ್‌ಟಿಸಿ ಬಸ್‌ಗಳು ನಗರದ ಒಳಗಿನ ನಿಲ್ದಾಣಕ್ಕೆ ಬರುವ ಬಗ್ಗೆ ಖಾಸಗಿ ಬಸ್ಸಿನವರು ಆಕ್ಷೇಪ ವ್ಯಕ್ತಪಡಿಸಿ, ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದರು. ಈ ಸಂಬಂಧ ಲೋಕಾಯುಕ್ತ ತೀರ್ಪನ್ನು ಪರಿಶೀಲಿಸಿದ ಎಸಿ ಭೂಬಾಲನ್‌, ನಗರದ ನಿಲ್ದಾಣಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಬರಬಾರದು ಎಂದು ಉಲ್ಲೇಖೀಸಿಲ್ಲ ಎಂದರು. 

ರಿಕ್ಷಾಗಳಿಗೆ ಸ್ಟಿಕ್ಕರ್‌
ನಗರದಲ್ಲಿ ಗ್ರಾಮಾಂತರದ ರಿಕ್ಷಾಗಳ ಓಡಾಟ ಇರುವ ಬಗ್ಗೆ ಹೇಳಿದಾಗ ರಿಕ್ಷಾಗಳಿಗೆ ಕಲರ್‌ ಕೋಡಿಂಗ್‌ ಸ್ಟಿಕ್ಕರ್‌ ಹಾಕಲಾಗುವುದು ಎಂದು ಡಿವೈಎಸ್‌ಪಿ ಹೇಳಿದರು. ಬೆಳಗ್ಗೆ 9ರಿಂದ ಸಂಜೆ 6ರವರೆಗೆ ನಗರದ ಒಳಗೆ ಲೋಡ್‌, ಅನ್‌ಲೋಡ್‌ ವಾಹನಗಳಿಗೆ ಅವಕಾಶ ಇಲ್ಲ ಎಂದರು. ಆ.13ರಂದು ಸರಕಾರಿ ಹಾಗೂ ಖಾಸಗಿ ಬಸ್ಸುಗಳ ದಾಖಲೆಗಳ ಪರಿಶೀಲನೆ ನಡೆಯಲಿದೆ. ದಾಖಲೆ ಸಮರ್ಪಕ ಇಲ್ಲದಿದ್ದರೆ ಬಸ್‌ಗಳನ್ನು ಬಿಡುವುದಿಲ್ಲ ಎಂದರು.  ವರ್ತಕ ದಿನಕರ ಶೆಟ್ಟಿ, ರಿಕ್ಷಾ ಚಾಲಕ ಅಣ್ಣಯ್ಯ, ಮೊದಿನ್‌ ಸಾಬ್‌, ಬಸ್ಸು ಮಾಲಕ ಸುಧಾಕರ ಶೆಟ್ಟಿ, ರಿಕ್ಷಾ ಚಾಲಕರ ಸಂಘದ ಶಂಕರ ಅಂಕದಕಟ್ಟೆ, ಉದ್ಯಮಿ ಹಂಸರಾಜ್‌ ಶೆಟ್ಟಿ, ಮೆಜೆಸ್ಟಿಕ್‌ ಹಾಲ್‌ನ ಅರುಣ್‌ ಕುಮಾರ್‌ ಶೆಟ್ಟಿ ಮಾತನಾಡಿದರು. ತಾ.ಪಂ. ಇಒ ಕಿರಣ್‌ ಪೆಡೆಕರ್‌, ಕೆಎಸ್‌ಆರ್‌ಟಿಸಿ ಅಧಿಕಾರಿ ಸತ್ಯಂ, ಸಾರಿಗೆ ಅಧಿಕಾರಿಗಳು ಉಪಸ್ಥಿತರಿದ್ದರು. 

“ಜನ ರೊಚ್ಚಿಗೇಳುವಂತೆ ಮಾಡದಿರಿ’
ಶಾಸ್ತ್ರೀ  ಸರ್ಕಲ್‌ ಬಳಿ ಫ್ಲೈ ಓವರ್‌ ಕಾಮಗಾರಿ ಮುಗಿದೇ ಇಲ್ಲ. ಸರ್ವಿಸ್‌ ರಸ್ತೆ ಬಿಟ್ಟುಕೊಟ್ಟಿಲ್ಲ. ಬಸ್ರೂರು  ಮೂರುಕೈ ಬಳಿ ಅಂಡರ್‌ಪಾಸ್‌ ಕೆಲಸ ಆರಂಭಿಸಿಲ್ಲ. ಅಲ್ಲಿಂದ ಕೆಎಸ್‌ಆರ್‌ಟಿಸಿವರೆಗೆ ಪ್ರಯಾಣ ಸಾಧ್ಯವೇ ಆಗುತ್ತಿಲ್ಲ. ಹಾಗಿದ್ದರೂ ನವಯುಗ ಕಂಪೆನಿ ಕಾಮಗಾರಿ ನಡೆಸುತ್ತಿಲ್ಲ ಎಂದೂ ಆಕ್ರೋಶ ಕೇಳಿಬಂತು. ಇದಕ್ಕೆ ಉತ್ತರಿಸಿದ ನವಯುಗ ಕಂಪೆನಿ ಅಧಿಕಾರಿ, ಮೇ ಒಳಗೆ ಕಾಮಗಾರಿ ಮುಗಿಸಲಾಗುವುದು. ಸರ್ವಿಸ್‌ ರಸ್ತೆ ಆಗಿದ್ದು ಮಣ್ಣು ತುಂಬಿಸುವ ಕೆಲಸ ಮಳೆ ಮುಗಿದ ಕೂಡಲೇ ಮಾಡಲಾಗುವುದು ಎಂದರು. ಎಪ್ರಿಲ್‌ನಲ್ಲಿ ಫ್ಲೈ ಓವರ್‌ ಸಂಚಾರಕ್ಕೆ ಮುಕ್ತಗೊಳಿಸಬೇಕೆಂದು ಎಸಿ ಟಿ. ಭೂಬಾಲನ್‌ ಸೂಚಿಸಿದರು. ಜನ ರೊಚ್ಚಿ ಗೆದ್ದು ಟೋಲ್‌ಗೆ ಮುತ್ತಿಗೆ ಹಾಕುವ ಸ್ಥಿತಿ ತಂದುಕೊಳ್ಳಬೇಡಿ ಎಂದು ಡಿವೈಎಸ್‌ಪಿ ಬಿ. ದಿನೇಶ್‌ ಕುಮಾರ್‌ ಎಚ್ಚರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next