ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ನಲ್ಲಿ ಮತ್ತೆ ಚೀನಾ ಸೇನೆ ಪ್ರಚೋದನಕಾರಿಯಾಗಿ ನಡೆದುಕೊಂಡು ಭಾರತದ ಗಡಿ ಪ್ರದೇಶವನ್ನು ಆಕ್ರಮಿಸಿಕೊಳ್ಳಲು ಬಂದು ಮುಖಭಂಗ ಅನುಭವಿಸಿದ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಜನಪ್ರಿಯ ಪಬ್ ಜಿ ಸೇರಿದಂತೆ 118 ಚೀನಾ ಮೂಲದ ಆ್ಯಪ್ ಗಳನ್ನು ನಿಷೇಧಿಸಿದೆ ಎಂದು ವರದಿ ತಿಳಿಸಿದೆ.
ಗಡಿ ಪ್ರದೇಶದಲ್ಲಿ ಪದೇ, ಪದೇ ಕ್ಯಾತೆ ತೆಗೆದು ಸಂಘರ್ಷಕ್ಕೆ ಇಳಿಯುತ್ತಿದ್ದ ಚೀನಾಕ್ಕೆ ಪರೋಕ್ಷವಾಗಿ ಆರ್ಥಿಕ ಹೊಡೆತ ನೀಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದ ಭಾರತ ಆರಂಭಿಕವಾಗಿಯೇ ಜನಪ್ರಿಯ ಟಿಕ್ ಟಾಕ್ ಸೇರಿದಂತೆ ಚೀನಿ ನಿರ್ಮಿತ 59 ಆ್ಯಪ್ ಗಳನ್ನು ನಿಷೇಧಿಸಿತ್ತು.
ಅಷ್ಟೇ ಅಲ್ಲ ಚೀನಾ ಜತೆಗಿನ ಹಲವಾರು ಒಪ್ಪಂದಗಳನ್ನು ಕೂಡಾ ಭಾರತ ಸರ್ಕಾರ ರದ್ದುಪಡಿಸಿತ್ತು. ಇದರಿಂದ ಚೀನಾ ಪರೋಕ್ಷವಾಗಿ ಆರ್ಥಿಕವಾಗಿ ಭಾರೀ ಹೊಡೆತ ತಿಂದಿತ್ತು.
ಇಲೆಕ್ಟ್ರಾನಿಕ್ಸ್ ಮತ್ತು ಇನ್ ಫಾರ್ಮೆಶನ್ ಟೆಕ್ನಾಲಜಿ ಸಚಿವಾಲಯದ ಪ್ರಕಾರ, ಸೆಕ್ಷನ್ 69ರ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಈ ಮೊಬೈಲ್ ಗೇಮ್ ಅನ್ನು ನಿಷೇಧಿಸಲಾಗಿದೆ. ಭಾರತದ ಸಾರ್ವಭೌಮತೆ ಮತ್ತು ಏಕತೆಗೆ ಹಾನಿಯನ್ನುಂಟು ಮಾಡುವ ಚಟುವಟಿಕೆಯಲ್ಲಿ ತೊಡಗಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸಚಿವಾಳಯ ಸ್ಪಷ್ಟಪಡಿಸಿದೆ.
ಭಾರತದಲ್ಲಿ ಕನಿಷ್ಠ 33 ಮಿಲಿಯನ್ ಪಬ್ ಜಿ ಪ್ಲೇಯರ್ಸ್ ಇದ್ದಿರುವುದಾಗಿ ವರದಿ ತಿಳಿಸಿದೆ. ಭಾರತದ ಸೈಬರ್ ಸ್ಪೇಸ್, ರಕ್ಷಣೆ ಮತ್ತು ಸುರಕ್ಷತೆಗೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಕೇಂದ್ರ ತಿಳಿಸಿದೆ.