Advertisement

ಪಬ್‌, ಬಾರ್‌ ಸುರಕ್ಷತೆ ಪರಿಶೀಲನೆ

12:32 PM Dec 31, 2017 | Team Udayavani |

ಬೆಂಗಳೂರು: ಮುಂಬೈನ ಕಮಲಾ ಮಿಲ್ಸ್‌ ಕಟ್ಟಡದಲ್ಲಿ ಬೆಂಕಿ ಅವಘಡ ನಡೆದ ಹಿನ್ನೆಲೆಯಲ್ಲಿ ನಗರದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಶನಿವಾರ ನಗರದ ಎಂ.ಜಿ, ಬ್ರಿಗೇಡ್‌ ರಸ್ತೆ, ಚರ್ಚ್‌ಸ್ಟ್ರೀಟ್‌, ಇಂದಿರಾನಗರ, ಕೋರಮಂಗಲ ಸೇರಿ ವಿವಿಧ ಪ್ರದೇಶಗಳಲ್ಲಿರುವ ಪಬ್‌ ಹಾಗೂ ಬಾರ್‌ಗಳನ್ನು ಪರಿಶೀಲಿಸಿದರು.

Advertisement

ಈ ವೇಳೆ ಅಗ್ನಿನಂದಕ ಹಾಗೂ ಅಗ್ನಿ ಅವಘಡ ಸುರಕ್ಷತಾ ನಿಯಮಗಳನ್ನು ಪಾಲಿಸದ 12 ಪಬ್‌ ಮತ್ತು ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಗೆ ನೋಟಿಸ್‌ ಜಾರಿ ಮಾಡಿದ್ದು, 15 ದಿನಗಳೊಗೆ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದ್ದಾರೆ.

ಬಹುಮಹಡಿ ಕಟ್ಟಡಗಳಲ್ಲಿರುವ ಪಬ್‌ ಹಾಗೂ ಬಾರ್‌ಗಳು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿವೆಯೇ, ಬೆಂಕಿಯನ್ನು ಶಮನಗೊಳಿಸುವ ಉಪಕರಣಗಳು ಹಾಗೂ ರಾಸಾಯನಿಕಗಳು ಇವೆಯೇ, ಬೆಂಕಿ ಉಂಟಾದರೆ ತಪ್ಪಿಸಿಕೊಳ್ಳಲು ಮಾರ್ಗಗಳು ಇವೆಯೇ ಎಂಬುದನ್ನು ಪರಿಶೀಲಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಮಹಾನಿರ್ದೇಶಕ ಎಂ.ಎನ್‌.ರೆಡ್ಡಿ, ಇಂದಿರಾನಗರ, ಕೋರಮಂಗಲ ಬಹುಮಹಡಿ ಕಟ್ಟಡಗಳಲ್ಲಿರುವ ಪಬ್‌ ಮತ್ತು ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲಿ ಹೊಸವರ್ಷಾಚರಣೆ ಆಚರಿಸಲು ಸಿದ್ಧತೆ ಮಾಡಿಕೊಂಡಿವೆ.

ಈ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಇಲಾಖೆ ಸಿಬ್ಬಂದಿ ಅಂತಹ ಕಟ್ಟಡಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕೆಲವೊಂದು ಕಟ್ಟಡಗಳ ಸುರಕ್ಷತಾ ಕ್ರಮ ಇಲ್ಲದಿರುವುದರಿಂದ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.

Advertisement

ಇಂದಿರಾನಗರದಲ್ಲಿರುವ ವಪೂರ್‌, ಪಿಯೋಸ್‌,ಹಮ್ಮಿಂಗ್‌ ಟ್ರಿ, ಶೆರ್ಲಾಕ್‌, ಟಿಪ್ಸಿಬುಲ್‌, ಎಸ್ಕೆಪ್‌ ಹೋಟೆಲ್‌ ಆ್ಯಂಡ್‌ ಸ್ಪಾ, ಕೋರಮಂಗಲದಲ್ಲಿರುವ ಬಾರ್‌ಬೆಕ್‌ ನೇಷನ್‌, ಬೇಸಿಲ್‌ ಮೊನಾರ್ಕ್‌, ಟ್ಯೂಬೆ ಬಾರ್‌, ಆರ್‌.ಎನ್‌.ಸ್ಕ್ವೇರ್‌, ಬಾರ್ಲೆಸ್‌ ಬಾರ್‌, ಇಕ್ವಿನಾಕ್ಸ್‌ ಇಂದ್ರಪ್ರಸ್ಥ ಪಬ್‌ ಮತ್ತು ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

ಹೊಯ್ಸಳ ಸಿಬ್ಬಂದಿ ಗಸ್ತು: ಡಿ.31ರ ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ಒಂದು ದಿನ ಮೊದಲೇ(ಶನಿವಾರ ಸಂಜೆ) ನಗರದ ಎಲ್ಲ ವಲಯಗಳ ಡಿಸಿಪಿಗಳ ನೇತೃತ್ವದಲ್ಲಿ ಪೊಲೀಸ್‌ ಸಿಬ್ಬಂದಿ ಹಾಗೂ ಹೊಯ್ಸಳ ವಾಹನಗಳು ಗಸ್ತು ತಿರುಗಿದವು. ವೈಟ್‌ಫೀಲ್ಡ್‌, ಈಶಾನ್ಯ, ದಕ್ಷಿಣ, ಉತ್ತರ ಸೇರಿದಂತೆ ಎಲ್ಲ ವಿಭಾಗದ ಡಿಸಿಪಿಗಳು, ಎಸಿಪಿಗಳು, ಚಿತಾ, ಹೊಯ್ಸಳ ವಾಹನಗಳ ಜತೆ ಪ್ರಮುಖ ರಸ್ತೆಗಳಲ್ಲಿ ಪರೇಡ್‌ ನಡೆಸಿದರು.

ಪ್ರಮುಖವಾಗಿ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್‌ ರಸ್ತೆಗಳಲ್ಲಿ ಸಾರ್ವಜನಿಕರಲ್ಲಿ ಧೈರ್ಯ ತುಂಬಲು ಹತ್ತಾರು ಹೊಯ್ಸಳ, ಪಿಂಕ್‌ ಹೊಯ್ಸಳ ಗಸ್ತು ತಿರುಗಿದವು. ವೈಟ್‌ಫೀಲ್ಡ್‌ ವಲಯದಲ್ಲಿ ಹೆಚ್ಚುವರಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಕೇಕ್‌ ಕತ್ತರಿಸಿ ಸಿಬ್ಬಂದಿ ಹೊಸವರ್ಷಾಚರಣೆಯ ಶುಭಾಶಯ ತಿಳಿಸಿದರು.

ಈ ವೇಳೆ ಮಾತನಾಡಿದ ಸೀಮಂತ್‌ ಕುಮಾರ್‌ ಸಿಂಗ್‌, ಹೊಸವರ್ಷಾಚರಣೆ ಸಂದರ್ಭದಲ್ಲಿ ಸಿಬ್ಬಂದಿ ಕರ್ತವ್ಯದ ಮೇಲೆ ಬೇರೆಡೆ ಹೋಗುತ್ತಾರೆ. ಹೀಗಾಗಿ ಒಂದು ದಿನ ಮೊದಲೇ ಶುಭಾಶಯ ಕೋರಿದ್ದೇನೆ. ಈ ಮೂಲಕ ಸಿಬ್ಬಂದಿಯಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಠಾಣೆಗಳಿಗೆ ಸುತ್ತೋಲೆ: ಸಂಭ್ರಮ ಆಚರಣೆ ಹಿನ್ನೆಲೆಯಲ್ಲಿ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಹಲವು ಮಂದಿಯ ಪ್ರಾಣ ಹಾನಿಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಅಪಘಾತ ತಡೆಯಲು ವಿಶೇಷ ಕಾರ್ಯಾಚರಣೆ ನಡೆಸುವಂತೆ ನಗರದ ಎಲ್ಲ ಸಂಚಾರಿ ಠಾಣೆಗಳಿಗೆ ಸಂಚಾರ ವಿಭಾಗದ ಹೆಚ್ಚವರಿ ಪೊಲೀಸ್‌ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಪ್ರತಿಯೊಂದ ಸಂಚಾರಿ ಠಾಣೆಗಳ ಸಿಬ್ಬಂದಿ ತಂಡ ರಚಿಸಿಕೊಂಡು ಡಿ.30 ಹಾಗೂ 31ರಂದು ರಾತ್ರಿ ವೇಳೆ ವಾಹನ ತಪಾಸಣೆ ನಡೆಸಬೇಕು ಎಂದು ಸೂಚಿಸಿದ್ದಾರೆ.

“ದುರ್ಗಾ’ ಬರ್ತಾಳೆ ಎಚ್ಚರ!: ಹೊಸವರ್ಷಾಚರಣೆ ಸಂದರ್ಭದಲ್ಲಿ ಯುವತಿಯರ ಜತೆ ಯುವಕರು ಅನುಚಿತವಾಗಿ ವರ್ತಿಸಿದರೆ “ದುರ್ಗಾ’ ಬರುತ್ತಾಳೆ ಎಚ್ಚರಿಕೆಯಿರಲಿ. ಹೌದು, ಕಿಕ್‌ಬಾಕ್ಸಿಂಗ್‌ ತರಬೇತಿ ಪಡೆದಿರುವ ಸುಮಾರು 100 ಮಂದಿ ಯುವತಿಯರು ದುರ್ಗಾ ಎಂಬ ತಂಡ ಕಟ್ಟಿಕೊಂಡಿದ್ದು, ಎಂ.ಜಿ.ರಸ್ತೆ ಮತ್ತು ಬ್ರಿಗೇಡ್‌ ರಸ್ತೆಯಲ್ಲಿ ಸಂಚರಿಸಲಿದ್ದಾರೆ. ಒಂದು ವೇಳೆ ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದರೆ ಸ್ಥಳದಲ್ಲೇ ಅಂತಹ ಯುವಕರಿಗೆ ಶಾಸ್ತಿ ಮಾಡಲಿದ್ದಾರೆ.

ನಂದಿ, ಅವುಲು ಬೆಟ್ಟ ಪ್ರವೇಶ ನಿಷೇಧ: ಈ ಬಾರಿಯ ಹೊಸ ವರ್ಷವನ್ನು ಪ್ರಸಿದ್ಧ ಪ್ರವಾಸಿ ತಾಣ ನಂದಿ ಬೆಟ್ಟದಲ್ಲಿ ಆಚರಿಸಲು ನೀವೇನಾದರೂ ಪ್ಲಾನ್‌ ಮಾಡಿದ್ದರೆ, ಈಗಲೇ ಪ್ಲಾನ್‌ ಬದಲಿಸಿಬಿಡಿ. ಏಕೆಂದರೆ ಡಿ.31ರ ಸಂಜೆಯಿಂದ ಜ.1ರ ಬೆಳಗಿನವರೆಗೆ ಯಾರೊಬ್ಬರೂ ನಂದಿಬೆಟ್ಟ ಪ್ರವೇಶಿಸುವಂತಿಲ್ಲ.

ಪ್ರವಾಸಿಗರು ಸೇರಿ ಎಲ್ಲರಿಗೂ ಪ್ರವೇಶ ನಿಷೇಧಿಸಲಾಗಿದೆ! ಭಾನುವಾರ ಸಂಜೆ 4 ಗಂಟೆಯಿಂದ ಸೋಮವಾರ ಬೆಳಗ್ಗೆ 8 ಗಂಟೆಯವರೆಗೂ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇದಿಸಲಾಗಿದೆ. ಹೊಸ ವರ್ಷ ಸಂಭ್ರಮದ ನೆಪದಲ್ಲಾಗುವ ಅಹಿತಕರ ಘಟನೆಗಳನ್ನು ತಡೆಯುವುದು ಮತ್ತು

ಸಂಭ್ರಮಾಚರಣೆ ವೇಳೆ ನಡೆಯುವ ಕೆಲ ಚಟುವಟಿಕೆಗಳಿಂಧ ಬೆಟ್ಟದ ಸೌಂದರ್ಯದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯುವ ಉದ್ದೇಶದಿಂದ ಬೆಟ್ಟದ ಮೇಲೆ ಬೀರುವ ದುಷ್ಪರಿಣಾಮ ತಡೆಯಲು ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್‌ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

ಅವುಲು ಬೆಟ್ಟಕ್ಕೂ ನಿಷೇಧ: ಇದೇ ವೇಳೆ ಸೆಲ್ಫಿ ಸ್ವಾಟ್‌ ಎಂದೇ ಖ್ಯಾತಿ ಪಡೆದಿರುವ ಚಿಕ್ಕಬಳ್ಳಾಪುರ ತಾಲೂಕಿನ ಅವುಲು ಬೆಟ್ಟದ ಪ್ರವೇಶಕ್ಕೂ ನಿಷೇಧವಿದ್ದು, ಭಾನುವಾರ ಸಂಜೆ 4ರಿಂದ ಸೋಮವಾರ ಬೆಳಗ್ಗೆ 8 ಗಂಟೆವರೆಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next