Advertisement

ಪಿಯುಸಿ ಪಠ್ಯಕ್ರಮದ ಕಡಿತದಲ್ಲಿ ಪ್ರಮುಖ ಪಠ್ಯಗಳೇ ನಾಪತ್ತೆ!

10:49 PM Oct 24, 2020 | sudhir |

ಬೆಂಗಳೂರು: ಪಿಯುಸಿ ಪಠ್ಯಕ್ರಮದಲ್ಲಿ ಶೇ. 30 ಕಡಿತ ಘೋಷಿಸಲಾಗಿದ್ದು, ಕತ್ತರಿಯಾಡಿಸುವ ಭರಾಟೆಯಲ್ಲಿ ಪ್ರಮುಖ ಅಧ್ಯಾಯಗಳೇ ಮಾಯವಾಗಿವೆ.

Advertisement

ರಾಜ್ಯಶಾಸ್ತ್ರದಲ್ಲಿ ಭಾರತದ ರಾಜಕೀಯದ ನೂತನ ಪ್ರವೃತ್ತಿ, ಅಸ್ಮಿತೆ, ರಾಜಕೀಯದ ಉಗಮ, ಭ್ರಷ್ಟಾಚಾರದ ವಿರುದ್ಧ ಜನತೆ, ಭಯೋತ್ಪಾದನೆ ವಿರುದ್ಧ ಯುವ ಜನಾಂಗ, ಸಮಕಾಲೀನ ರಾಜಕೀಯ ವಿದ್ಯಮಾನಗಳು ಸೇರಿ ಪ್ರಮುಖ ವಿಷಯಗಳೇ ನಾಪತ್ತೆಯಾಗಿವೆ!

ವ್ಯವಹಾರ ಅಧ್ಯಯನದಲ್ಲಿ ಫೈನಾನ್ಶಿಯಲ್‌ ಮಾರ್ಕೆಟಿಂಗ್‌, ಮಾರ್ಕೆಟಿಂಗ್‌ ಇತ್ಯಾದಿ ಪ್ರಸ್ತುತ ವಿಷಯಗಳನ್ನು ಕಡಿತ ಮಾಡಲಾಗಿದೆ. ದ್ವಿತೀಯ ಪಿಯು ಇತಿಹಾಸದಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ವಿಷಯವನ್ನೇ ತೆಗೆದುಹಾಕಲಾಗಿದೆ.
ವಿದ್ಯಾರ್ಥಿಗಳು ಆನ್‌ಲೈನ್‌, ಪೂರ್ವ ಮುದ್ರಿತ ತರಗತಿಗಳಲ್ಲಿ ಕಲಿತಿರುವ ಪಠ್ಯಗಳನ್ನು ಮತ್ತು ಭವಿಷ್ಯದ ಶಿಕ್ಷಣಕ್ಕೆ ಅವಶ್ಯವಿರುವ ಅಧ್ಯಾಯಗಳನ್ನು ಕಡಿತ ಮಾಡಿರುವುದು ವಿದ್ಯಾರ್ಥಿಗಳು, ಬೋಧಕರ ಆಕ್ಷೇಪಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಮೂರು ದಶಕದಲ್ಲಿ 40 ಲಕ್ಷ ಕಾರು ಉತ್ಪಾದಿಸಿ ಮೈಲಿಗಲ್ಲು ಸ್ಥಾಪಿಸಿದ ಟಾಟಾ ಮೋಟಾರ್ಸ್‌

ಅಧ್ಯಾಯಗಳನ್ನು ಆನ್‌ಲೈನ್‌ ಮೂಲಕ ಬೋಧಿಸಲಾಗಿದೆಯಾದರೂ ಅವುಗಳ ಪರಿಪೂರ್ಣ ಜ್ಞಾನವನ್ನು ನೇರ ತರಗತಿಯಲ್ಲಿ ಮಾತ್ರ ನೀಡಲು ಸಾಧ್ಯ. ಹೀಗಾಗಿ ಆನ್‌ಲೈನ್‌ ಬೋಧನೆ ಆಧಾರದಲ್ಲಿ ಕಡಿತ ಮಾಡಿರುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕ
ಶೈಕ್ಷಣಿಕ ವರ್ಷದ ಅರ್ಧದಷ್ಟು ತರಗತಿಗಳು ಈಗಾಗಲೇ ಬೋಧನೆ ಇಲ್ಲದೆ ಕಳೆದುಹೋಗಿವೆ. ಉಳಿದ ಅರ್ಧ ವರ್ಷದ ಸಮರ್ಪಕ ಬಳಕೆ ದೃಷ್ಟಿಯಿಂದ ಪ.ಪೂ. ಶಿಕ್ಷಣ ಇಲಾಖೆ ಆಯಾ ವಿಷಯ ತಜ್ಞರ ಸಹಯೋಗದೊಂದಿಗೆ ಶೇ.30 ರಷ್ಟು ಪಠ್ಯ ಕಡಿತಗೊಳಿಸಿ, ಶೇ.70ರಷ್ಟು ಪಠ್ಯ ವನ್ನು ಬೋಧನೆಗೆ ಉಳಿಸಿಕೊಂಡಿದೆ. ತರಗತಿ ಆರಂಭದ ಅನಂತರ ಶೇ.70ರಷ್ಟು ಪಠ್ಯದ ಬೋಧನೆ ಆರಂಭವಾಗಲಿದೆ. ಕಡಿತವಾಗಿರುವ ಮತ್ತು ಉಳಿಸಿಕೊಂಡಿರುವ ಪಠ್ಯದ ಸಂಪೂರ್ಣ ಮಾಹಿತಿಯನ್ನು ಇಲಾಖೆಯಿಂದ ಈಗಾಗಲೇ ಎಲ್ಲ ಉಪನ್ಯಾಸಕರಿಗೆ ಕಳುಹಿಸಿಕೊಡಲಾಗಿದೆ. ಒಟ್ಟಾರೆ ಪಠ್ಯ ಕಡಿತದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಅನೇಕ ಅಧ್ಯಾಯಗಳನ್ನು ತೆಗೆದಿರುವುದು ಮುಂದಿನ ಶೈಕ್ಷಣಿಕ ಬದುಕಿಗೆ ಮಾರಕವಾಗಲಿದೆ ಎಂಬ ವಾದವಿದೆ.

ದ್ವಿ. ಪಿಯುಸಿಗೆ ಸಮಸ್ಯೆ
ಪ್ರಸಕ್ತ ಸಾಲಿನಲ್ಲಿ ಪ್ರಥಮ ಪಿಯುಸಿಗೆ ಸೇರಿದ ವಿದ್ಯಾರ್ಥಿ ಗಳಿಗೂ ಶೇ.70ರಷ್ಟು ಪಠ್ಯ ಮಾತ್ರ ಸಿಗಲಿದೆ. 2021- 22ರಲ್ಲಿ ದ್ವಿತೀಯ ಪಿಯುಸಿ ಯಲ್ಲಿ ಶೇ.100ರಷ್ಟು ಪಠ್ಯ ಇರಲಿದೆ. ಇದರಿಂದ ವಿಜ್ಞಾನ, ವಾಣಿಜ್ಯ ವಿದ್ಯಾರ್ಥಿ ಗಳಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಇವರಿಗೆ ಮುಂದೆ ಬ್ರಿಡ್ಜ್ ಕೋರ್ಸ್‌ ನಡೆಸುವ ಬಗ್ಗೆ ಚಿಂತಿಸಬೇಕು. ಮುಂದೆ ತಾಂತ್ರಿಕ ಅಥವಾ ವೃತ್ತಿ ಪರ ಕೋರ್ಸ್‌ ಸೇರುವ ಅಭ್ಯರ್ಥಿ ಗಳಿಗೂ ಸಮಸ್ಯೆಯಾಗಲಿದ್ದು, ಸರಕಾರ ಶೈಕ್ಷಣಿಕ ವರ್ಷದ ಅಂತ್ಯದೊಳಗೆ ಸೂಕ್ತ ಪರಿಹಾರ ಸೂಚಿಸಬೇಕು ಎಂಬುದು ವಿದ್ಯಾರ್ಥಿ ಸಮೂಹದ ಆಗ್ರಹ.

 - ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next