Advertisement
ಪ್ರತಿ ವರ್ಷವೂ ದ್ವಿತೀಯ ಪಿಯುಸಿ ಪರೀಕ್ಷೆ ಸಂದರ್ಭ ಆಯಾ ದಿನದ ಹಾಜರಾತಿ ಇತ್ಯಾದಿ ಮಾಹಿತಿಯನ್ನು ನಿಗದಿತ ಕೇಂದ್ರಗಳಿಗೆ ನಿಯೋಜನೆಗೊಂಡ ಅಧಿಕಾರಿಗಳು ಕೈಬರಹದಲ್ಲಿ ಜಿಲ್ಲಾ ಮಟ್ಟಕ್ಕೆ ಕಳುಹಿಸಬೇಕಿತ್ತು. ಅನಂತರ ಅದು ಬೆಂಗಳೂರಿನಲ್ಲಿರುವ ಇಲಾಖೆಯ ಮುಖ್ಯ ಕಚೇರಿಗೆ ರವಾನೆಯಾಗುತ್ತಿತ್ತು. ಈ ಪ್ರಕ್ರಿಯೆಗೆ ಕನಿಷ್ಠ ಮೂರು ದಿನ ಬೇಕಾಗುತ್ತಿತ್ತು. ಈ ಬಾರಿ ಪರೀಕ್ಷೆ ಮುಗಿದ ಕೂಡಲೇ ಸಂಬಂಧಿತ ಮಾಹಿತಿಗಳು ಲಭ್ಯವಾಗುವಂತೆ ಆನ್‌ಲೈನ್ ಅಪ್‌ಡೇಟ್ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ.
ಈ ಬಾರಿ ಎಲ್ಲ ಜಿಲ್ಲಾ ಕೇಂದ್ರಗಳಿಂದ ಪ್ರತಿ ಪರೀಕ್ಷಾ ಕೇಂದ್ರದ ಐದು ರೀತಿಯ ದೈನಂದಿನ ಮಾಹಿತಿಗಳು ಇಲಾಖೆಯ ವೆಬ್‌ಸೈಟ್‌ನಲ್ಲೇ ಅಪ್‌ಡೇಟ್ ಆಗಲಿವೆ. ಪ್ರಶ್ನೆಪತ್ರಿಕೆಯು ಪರೀಕ್ಷಾ ಕೇಂದ್ರಗಳಿಗೆ ತಲುಪಿದ ಸಮಯ, ವಿದ್ಯಾರ್ಥಿಗಳ ಒಟ್ಟು ಸಂಖ್ಯೆ, ಹಾಜರು, ಗೈರುಹಾಜರು ಸಂಖ್ಯೆ, ಪರೀಕ್ಷಾ ಅಕ್ರಮಗಳು ನಡೆದಿದ್ದರೆ ಆ ಮಾಹಿತಿ, ಪರೀಕ್ಷಾ ಕೇಂದ್ರಗಳಲ್ಲಿರುವ ಅಧಿಕಾರಿಗಳ ಹೆಸರು, ಉಪಯೋಗಿಸಿದ ಪ್ರಶ್ನೆಪತ್ರಿಕೆಗಳ ಸಂಖ್ಯೆ ಇತ್ಯಾದಿಗಳನ್ನು ಆಯಾ ದಿನ ಅಧಿಕಾರಿಗಳು ಅಪ್‌ಡೇಟ್ ಮಾಡಬೇಕು. ಪಾರದರ್ಶಕತೆ ಮತ್ತು ಕ್ಷಿಪ್ರವಾಗಿ ಮಾಹಿತಿ ಪಡೆಯುವ ಉದ್ದೇಶದಿಂದ ಈ ಕ್ರಮ ಅನುಸರಿಸಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
Related Articles
ಮಾ.4ರಿಂದ 23ರ ವರೆಗೆ 2019-20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದೆ. ಈ ಬಾರಿ ವಿಜ್ಞಾನ ವಿಭಾಗದ 2.17 ಲಕ್ಷ, ವಾಣಿಜ್ಯ ವಿಭಾಗದ 2.61 ಲಕ್ಷ, ಕಲಾ ವಿಭಾಗದ 2.01 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ.
Advertisement
ಪಿಯುಸಿ ಪರೀಕ್ಷೆಯಲ್ಲಿ ಪಾರದರ್ಶಕ ವ್ಯವಸ್ಥೆ ಮತ್ತು ತತ್‌ಕ್ಷಣದ ಮಾಹಿತಿ ಸಿಗುವಂತಾಗಲು ಇದೇ ಮೊದಲ ಬಾರಿಗೆ ಪರೀಕ್ಷೆ ಮಾಹಿತಿಗಳನ್ನು ಅಪ್‌ಡೇಟ್ ಮಾಡಲು ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಎಲ್ಲ ಜಿಲ್ಲಾ ಕೇಂದ್ರಗಳ ಎಲ್ಲ ಸೆಂಟರ್‌ಗಳಿಂದ ಮಾಹಿತಿಗಳು ಇಲಾಖೆ ವೆಬ್‌ಸೈಟ್‌ನಲ್ಲೇ ಅಪ್‌ಡೇಟ್ ಆಗಲಿವೆ. ಇದರಿಂದ ಕೇಂದ್ರ ಕಚೇರಿಗೆ ಸಕಾಲಕ್ಕೆ ಮಾಹಿತಿ ಸಿಗಲಿದೆ.– ಕಲ್ಲಯ್ಯ, ಜಂಟಿ ನಿರ್ದೇಶಕರು (ಪರೀಕ್ಷಾಂಗ), ಪ.ಪೂ. ಶಿಕ್ಷಣ ಇಲಾಖೆ, ಬೆಂಗಳೂರು