ಬೆಂಗಳೂರು : ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಅವರ ನಿರ್ದೇಶನದಂತೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರ ವರ್ಗಾವಣೆ ಕೌನ್ಸೆಲಿಂಗ್ ಮುಂದೂಡಲಾಗಿದೆ.
ಶನಿವಾರ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಮುಂದಿನ ಆದೇಶದವರೆಗೂ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸದಂತೆ ಸೂಚಿಸಿದ್ದಾರೆ. ಅದರಂತೆ ವರ್ಗಾವಣೆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು “ಉದಯವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.
ವರ್ಗಾವಣೆ ಪ್ರಕ್ರಿಯೆಗೆ ಹಾಜರಾಗಬೇಕಿದ್ದ ಎಲ್ಲ ಉಪನ್ಯಾಸಕರಿಗೂ ಆಯಾ ಜಿಲ್ಲಾ ಉಪನಿರ್ದೇಶಕರ ಮೂಲಕ ಸಂದೇಶ ರವಾನೆ ಮಾಡಲಾಗಿದೆ. ವರ್ಗಾವಣೆ ಪ್ರಕ್ರಿಯೆ ಮುಂದೂಡಿರುವ ಮಾಹಿತಿಯ ಆದೇಶವನ್ನು ಇಲಾಖೆಯ ಜಂಟಿ ಕಾರ್ಯದರ್ಶಿಯವರು ಹೊರಡಿಸಿದ್ದಾರೆ.ಸರ್ಕಾರಿ ಶಾಲೆಗಳ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಹೈಕೋರ್ಟ್ ಈಗಾಗಲೇ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಪಿಯು ಉಪನ್ಯಾಸಕರ ವರ್ಗಾವಣೆ ಕೌನ್ಸೆಲಿಂಗ್ ಪರಿಷ್ಕೃತ ವೇಳಾಪಟ್ಟಿ ಇತ್ತೀಚಿಗಷ್ಟೇ ಪ್ರಕಟಿಸಲಾಗಿತ್ತು. ವೇಳಾಪಟ್ಟಿ ಪ್ರಕಾರ ಜುಲೈ 26ರಿಂದ ವರ್ಗಾವಣೆ ಪ್ರಕ್ರಿಯೆಗಳು ಆರಂಭವಾಗಬೇಕಿತ್ತು. ಆದರೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ನಿರ್ದೇಶನದಂತೆ ಇಲಾಖೆಯ ಅಧಿಕಾರಿಗಳು ವರ್ಗಾವಣೆ ಪ್ರಕ್ರಿಯೆಯನ್ನೇ ಮುಂದೂಡಿದ್ದಾರೆ.
ಉಪನ್ಯಾಸಕರ ಆಕ್ರೋಶ :
ಶಾಲಾ ಶಿಕ್ಷಕರ ವರ್ಗಾವಣೆ ತಡೆಯುವ ಪ್ರಯತ್ನ ಮಾಡಿರುವವರೇ ಪಿಯು ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆಗೂ ತಡೆ ಒಡ್ಡಿದ್ದಾರೆ.ಎ ವಲಯ (ನಗರ)ದಿಂದ ಸಿ ವಲಯ (ಗ್ರಾಮೀಣ) ಕಡ್ಡಾಯ ವರ್ಗಾವಣೆ ಮಾಡಬಾರದು ಎಂದು ಸರ್ಕಾರಿ ಮಟ್ಟದಲ್ಲಿ ಲಾಬಿ ನಡೆಸುತ್ತಿರುವವರೇ ಸಚಿವರ ಮೇಲೆ ಒತ್ತಡ ಹೇರಿದ್ದಾರೆ. ಇದರಿಂದ ಸಾವಿರಾರು ಉಪನ್ಯಾಸಕರಿಗೆ ಅನ್ಯಾಯವಾಗುತ್ತಿದೆ ಎಂದು ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.