ಹಾವೇರಿ: ನಗರದ ಹಾನಗಲ್ಲ ರಸ್ತೆಯಲ್ಲಿರುವ ಜಾನುವಾರು ಮಾರುಕಟ್ಟೆ ಆವರಣದಲ್ಲಿ 2.11ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಶೈಲಿಯ ವಿದೇಶಿ ತಂತ್ರಜ್ಞಾನ ಬಳಸಿಕೊಂಡು ತಲಾ 200ಮೆ.ಟನ್ ಸಾಮರ್ಥ್ಯದ 5 ಸೈಲೋ ಘಟಕಗಳು ನಿರ್ಮಾಣಗೊಂಡಿದ್ದು, ಬುಧವಾರ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ನೇತೃತ್ವದಲ್ಲಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿ ನಡೆಸಲಾಯಿತು.
ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಹಾವೇರಿ, ರಾಜ್ಯದ ಹಿಂದುಳಿದ ತಾಲೂಕುಗಳಲ್ಲಿರುವ ಎಪಿಎಂಸಿಗಳಿಗೆ ಮೂಲಭೂತ ಸೌಕರ್ಯ ಸೃಜನೆ ಯೋಜನೆಯಡಿ ಸ್ಥಳೀಯ ಎಪಿಎಂಸಿ ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ ಮೆಟ್ರಿಕ್ ಟನ್ ಸಾಮರ್ಥ್ಯದ 5 ಸೈಲೋ ಘಟಕಗಳನ್ನು ನಿರ್ಮಿಸಿ 1ಸಾವಿರ ಮೆಟ್ರಿಕ್‌ಟನ್ ಸಾಮರ್ಥ್ಯದ ಧಾನ್ಯಗಳನ್ನು ಸಂಗ್ರಹಿಸಲು ಕೃಷಿ ಮಾರಾಟ ಇಲಾಖೆಗೆ 2016-17ನೇ ಸಾಲಿನ ಬಜೆಟ್‌ನಲ್ಲಿ ಅನುಮೋದನೆ ನೀಡಲಾಗಿತ್ತು.
ಆರಂಭದಲ್ಲಿ 5 ಸೈಲೋ ಘಟಕಗಳನ್ನು 1.85ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಯೋಜನೆ ಸಿದ್ಧಗೊಳಿಸಲಾಗಿತ್ತು. ಇದಕ್ಕಾಗಿ ಸರ್ಕಾರ 1ಕೋಟಿ ರೂ. ಅನುದಾನ ಮಂಜೂರು ಮಾಡಿತ್ತು. ಉಳಿದ 85ಲಕ್ಷ ರೂ.ಗಳನ್ನು ಎಪಿಎಂಸಿಯಿಂದ ಭರಿಸಲು ಉ¨ªೇಶಿಸಲಾಗಿತ್ತು. ಇದೀಗ ಈ ಸೈಲೋ ಘಟಕಗಳ ನಿರ್ಮಾಣ ವೆಚ್ಚ 2.11ಕೋಟಿ ರೂ.ಗಳಷ್ಟಾಗಿದೆ. ರಾಜ್ಯದ ಕಲಬುರಗಿ ಬಿಟ್ಟರೆ ಹಾವೇರಿಯಲ್ಲಿಯೇ 2ನೇ ಘಟಕ ಇದೀಗ ಕಾರ್ಯಾರಂಭಗೊಂಡಿದೆ ಎಂದು ತಿಳಿಸಿದರು.
ಧಾನ್ಯಗಳ ಸಂಗ್ರಹಣೆಗೆ ಸೂಕ್ತ: ಸೈಲೋ ಘಟಕಗಳು ಗೋದಾಮುಗಳಲ್ಲಿ ಧಾನ್ಯಗಳನ್ನು ಸಂಗ್ರಹಿಸಿಡುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಧಾನ್ಯಗಳನ್ನು ಸಂರಕ್ಷಿಸುವ ಸಾಧನವಾಗಿದೆ. ರೈತರಷ್ಟೇ ಅಲ್ಲದೇ, ವರ್ತಕರು ಸಹ ಇವುಗಳ ಬಳಕೆ ಮಾಡಿಕೊಳ್ಳಬಹುದಾಗಿದೆ. ಈಗಾಗಲೇ ವಿದೇಶಗಳಲ್ಲಿ ಈ ಮಾದರಿಯನ್ನು ಅನುಸರಿಸಲಾಗುತ್ತಿದೆ. ಹಾವೇರಿ ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದವಸ ಧಾನ್ಯಗಳನ್ನು ಬೆಳೆಯಲಾಗುತ್ತಿದೆ. ರೈತರು ತಾವು ಬೆಳೆದ ಮೆಕ್ಕೆಜೋಳ, ಜೋಳ, ರಾಗಿ, ಹುರುಳಿ, ಸೋಯಾಅವರೆ ಸೇರಿದಂತೆ ಎಲ್ಲ ರೀತಿಯ ದವಸ ಧಾನ್ಯಗಳನ್ನು ಸೈಲೋದಲ್ಲಿ ಸಂಗ್ರಹಿಸಿಡಲು ಅನುಕೂಲವಾಗಲಿದೆ.
ಸದ್ಯ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯುವುದರಿಂದ ಅದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇಲ್ಲಿ ಧಾನ್ಯಗಳನ್ನು ಸಂಗ್ರಹಿಸಲು ಎಷ್ಟು ದರ ನಿಗದಿಪಡಿಸಬೇಕು ಎಂಬುದನ್ನು ಶೀಘ್ರದಲ್ಲಿಯೇ ನಿರ್ಣಯಿಸಲಾಗುವುದು ಎಂದು ಮಲ್ಲಿಕಾರ್ಜುನ ಹಾವೇರಿ ತಿಳಿಸಿದರು. ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯರಾದ ರುದ್ರೇಶ ಚಿನ್ನಣ್ಣವರ, ರಮೇಶ ಚಾವಡಿ, ಶಿವಕುಮಾರ ಮಾಹೂರ, ವಿ.ಜಿ. ಬಣಕಾರ, ಎಪಿಎಂಸಿ ಕಾರ್ಯದರ್ಶಿ ಪರಮೇಶ್ವರ ನಾಯಕ, ಬೆಳಗಾವಿ ಎಂಡಿಪಿ ಇಇ ಹನುಮರೆಡ್ಡಿ ಗದ್ದಿ, ಎಇಇ ಎ.ಬಿ. ಬಾಯಿಸರ್ದಾರ, ಎಇ ಕೃಷ್ಣ ಆರೇರ, ಬಿಲ್ಟೆಕ್ ಎಂಜಿನಿಯರಿಂಗ್ ಸಲ್ಯೂಶನ್ಸ್‌ನ ವೈ.ಬಿ. ಮಂಜುನಾಥ, ವರ್ತಕರಾದ ಪಿ.ಡಿ. ಶಿರೂರ, ಶಿವಬಸಪ್ಪ ವಾಲಿಶೆಟ್ಟರ, ಪಾಪಣ್ಣ ಅಗಡಿ, ನಿರಂಜನ ತಾಂಡೂರ, ಎಂ.ವಿ.ಹಿರೇಮಠ, ಸೋಮಣ್ಣ ಯರೇಶಿಮಿ, ಗಂಗಾಧರ ಕರ್ಜಗಿ, ರೈತರಾದ ಮಹಾಂತೇಶ ಶೀತಾಳದ, ರುದ್ರಪ್ಪ ಹಾದಿಮನಿ, ವೀರಯ್ಯ ಪತ್ರಿಮಠ ಇತರರು ಇದ್ದರು.
ಸೈಲೋ ಘಟಕದ ವಿಶೇಷಗಳು
ಗ್ಯಾಲ್ವನೈಸ್ಡ್ ಸೈಲೋಗಳನ್ನು ದೀರ್ಘ ಕಾಲದವರೆಗೆ ಸಗಟು ಧಾನ್ಯ ಸಂಗ್ರಹಣೆಗೆ ಬಳಸಬಹುದಾಗಿದೆ. ಇದನ್ನು ಗ್ಯಾಲ್ವನೈಸ್ಡ್ ಉಕ್ಕಿನಿಂದ ನಿರ್ಮಿಸಲಾಗುತ್ತದೆ. ಲೆವೆಲ್ ಸ್ವಿಚ್, ವಾತಾವರಣ ಅನುಕೂಲ ವ್ಯವಸ್ಥೆ, ಉಷ್ಣಾಂಶ ಮೇಲ್ವಿಚಾರಣೆ, ಗಾಳಿಯಾಡುವ ವ್ಯವಸ್ಥೆ, ಸ್ವೀಪ್ ಅಗರ್‌ಗಳೂ ಇರುವುದರಿಂದ ಸಂಗ್ರಹಿಸಿದ ಧಾನ್ಯ ಹಾಳಾಗುವ ಸಂಭವ ಕಡಿಮೆ ಇರುತ್ತದೆ. ಹೀಗಾಗಿ, ಹಗೆವಿನ ಬದಲು ಸೈಲೋ ಘಟಕಗಳು ರೈತರಿಗೆ ಹಾಗೂ ವರ್ತಕರಿಗೆ ಧಾನ್ಯಗಳನ್ನು ಸಂಗ್ರಹಿಸಿಡಲು ಅನುಕೂಲಕರವಾಗಿವೆ.
ಪೂರ್ವಜರು ಬಳಸುತ್ತಿದ್ದ ಹಗೆಗಳಿಗೆ ಮಳೆ ನೀರು ತಗಲಿ, ತೇವಾಂಶ ಹೆಚ್ಚಳವಾಗಿ, ಜಾಗೆ ಹಾಗೂ ಸುರಕ್ಷತೆಯ ಕೊರತೆ ಎದುರಾಗುತ್ತಿತ್ತು. ಅಲ್ಲದೇ, ನಾನಾ ಕಾರಣಗಳಿಂದ ರೈತರು ಅವುಗಳ ಬಳಕೆಯನ್ನು ನಿಲ್ಲಿಸಿದ್ದಾರೆ. ಹೀಗಾಗಿ, ರೈತರು ಬೆಳೆದ ಧಾನ್ಯಗಳಿಗೆ ಸೂಕ್ತ ಬೆಲೆ ಇಲ್ಲದೇ ಇದ್ದರೂ ಸಂಗ್ರಹಿಸಿಡಲು ಸಾಧ್ಯವಾಗದೇ ಅಗ್ಗದ ದರಕ್ಕೆ ಮಾರಿ ನಷ್ಟ ಅನುಭವಿಸುವಂತಾಗಿದೆ. ಅಂತಹ ರೈತರಿಗೆ ಸೈಲೋ ಘಟಕಗಳು ವರವಾಗಲಿವೆ.
ಮಲ್ಲಿಕಾರ್ಜುನ ಹಾವೇರಿ, ಎಪಿಎಂಸಿ ಅಧ್ಯಕ್ಷ