ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹೊಸ ವರ್ಷದ ಮೊದಲ ದಿನವೇ ಇತಿಹಾಸವನ್ನು ಸೃಷ್ಟಿಸಿದೆ. ಇಸ್ರೋ ಪಿಎಸ್‌ಎಲ್‌ವಿ-ಸಿ58/ಎಕ್ಸ್‌ಪೋಸ್ಯಾಟ್ ಅನ್ನು ಬೆಳಗ್ಗೆ 9.10ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟದ ಉಡಾವಣ ನೆಲೆಯಿಂದ ಬೆಳಗ್ಗೆ 9.10ಕ್ಕೆ ಪಿಎಸ್‌ಎಲ್‌ವಿ-ಸಿ58 ರಾಕೆಟ್ ಮೂಲಕ ಎಕ್ಸ್‌ಪೋಸ್ಯಾಟ್ ಯಶಸ್ವಿಯಾಗಿ ನಭಕ್ಕೆ ಜಿಗಿದಿದ್ದು ಇದರೊಂದಿಗೆ ಬಾಹ್ಯಾಕಾಶದಲ್ಲಿರುವ ಕಪ್ಪುಕುಳಿ (ಬ್ಲ್ಯಾಕ್ ಹೋಲ್) ಸಹಿತ ಅಲ್ಲಿ ಹೊರಹೊಮ್ಮುವ ಕ್ಷಕಿರಣಗಳ ಮೂಲವನ್ನು ಅಧ್ಯಯನ ಮಾಡಲಿದೆ.
ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C58) ರಾಕೆಟ್, ತನ್ನ 60 ನೇ ಕಾರ್ಯಾಚರಣೆಯಲ್ಲಿ, ಮುಖ್ಯ ಪೇಲೋಡ್ ‘ಎಕ್ಸ್‌ಪೋಸ್ಯಾಟ್’ ಅನ್ನು 10 ಇತರ ಉಪಗ್ರಹಗಳೊಂದಿಗೆ ಹೊತ್ತೊಯ್ದಿದೆ.
‘ಎಕ್ಸ್ ರೇ ಪೋಲಾರಿಮೀಟರ್ ಸ್ಯಾಟಲೈಟ್’ (XPoSAT) ಎಕ್ಸ್ ರೇ ಮೂಲಗಳ ರಹಸ್ಯಗಳನ್ನು ಬಿಚ್ಚಿಡಲು ಮತ್ತು ‘ಕಪ್ಪು ರಂಧ್ರಗಳ’ ನಿಗೂಢ ಜಗತ್ತನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತದೆ. ISRO ಪ್ರಕಾರ, ಬಾಹ್ಯಾಕಾಶ-ಆಧಾರಿತ ಧ್ರುವೀಕರಣ ಮಾಪನಗಳಲ್ಲಿ ಖಗೋಳ ಮೂಲಗಳಿಂದ ಎಕ್ಸ್-ರೇ ಹೊರಸೂಸುವಿಕೆಯನ್ನು ಅಧ್ಯಯನ ಮಾಡಲು ಬಾಹ್ಯಾಕಾಶ ಸಂಸ್ಥೆಯ ಮೊದಲ ಮೀಸಲಾದ ವೈಜ್ಞಾನಿಕ ಉಪಗ್ರಹವಾಗಿದೆ ಎನ್ನಲಾಗಿದೆ.
ಭಾರತೀಯ ಬಾಹ್ಯಾಕಾಶ ಸಂಸ್ಥೆ ISRO ಹೊರತುಪಡಿಸಿ, ಅಮೇರಿಕನ್ ಬಾಹ್ಯಾಕಾಶ ಸಂಸ್ಥೆ NASA ಡಿಸೆಂಬರ್ 2021 ರಲ್ಲಿ ಸೂಪರ್ನೋವಾ ಸ್ಫೋಟದ ಅವಶೇಷಗಳು, ಕಪ್ಪು ಕುಳಿಗಳಿಂದ ಹೊರಹೊಮ್ಮುವ ಕಣಗಳ ಸ್ಟ್ರೀಮ್ ಗಳು ಮತ್ತು ಇತರ ಖಗೋಳ ವಿದ್ಯಮಾನಗಳ ಬಗ್ಗೆ ಇದೇ ರೀತಿಯ ಅಧ್ಯಯನವನ್ನು ನಡೆಸಿತು. ಎಕ್ಸ್ ರೇ ಧ್ರುವೀಕರಣದ ಬಾಹ್ಯಾಕಾಶ ಆಧಾರಿತ ಅಧ್ಯಯನವು ಅಂತರಾಷ್ಟ್ರೀಯವಾಗಿ ಪ್ರಾಮುಖ್ಯತೆ ಪಡೆಯುತ್ತಿದೆ ಮತ್ತು ಈ ಸಂದರ್ಭದಲ್ಲಿ ಎಕ್ಸ್‌ಪೋಸಾಕ್ಟ್ ಮಿಷನ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಇಸ್ರೋ ಹೇಳಿದೆ.
ಇದನ್ನೂ ಓದಿ: Indresh Kumar: ರಾಮ ಮಂದಿರ ಉದ್ಘಾಟನೆ ದಿನ ಮಸೀದಿಗಳಲ್ಲೂ ರಾಮ ಜಪ ಪಠಿಸಲಿ: RSS ನಾಯಕ