Advertisement

ಪಿಎಸ್ಐ ಅಕ್ರಮ; ಪ್ರಭಾವಿ ಸಚಿವರ ಹೆಸರನ್ನು ದಾಖಲಿಸಿಕೊಳ್ಳುತ್ತಿಲ್ಲ: ಡಿಕೆಶಿ

01:34 PM Jul 06, 2022 | Team Udayavani |

ಬೆಂಗಳೂರು: ‘ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಬಂಧನಕ್ಕೊಳಗಾಗಿರುವ ಎಡಿಜಿಪಿ ಅಮೃತ್ ಪೌಲ್ ಅವರು ಈ ಹಗರಣದಲ್ಲಿ ಭಾಗಿಯಾಗಿರುವ ಸಚಿವರು, ನಾಯಕರ ಹೆಸರನ್ನು ಬಹಿರಂಗಪಡಿಸಲು ಸಿದ್ಧವಿದ್ದರೂ ತನಿಖಾಧಿಕಾರಿಗಳು ಅದನ್ನು ದಾಖಲಿಸಿಕೊಳ್ಳುತ್ತಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆರೋಪಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಕರ್ನಾಟಕ ಭ್ರಷ್ಟಾಚಾರದ ರಾಜಧಾನಿಯಾಗಿದೆ. ಈ ಕುರಿತು ಹೈಕೋರ್ಟ್ ನ್ಯಾಯಾಧೀಶರು ಏನು ಹೇಳಿದ್ದಾರೆ ಎಂದು ಎಲ್ಲರೂ ನೋಡಿದ್ದಾರೆ. ಪಿಎಸ್ಐ ಹಗರಣದಲ್ಲಿ ರಾಜ್ಯದ ಐಪಿಎಸ್ ಅಧಿಕಾರಿಗಳು, ರಾಜಕಾರಣಿಗಳು, ಮಂತ್ರಿಗಳು ಭಾಗಿಯಾಗಿದ್ದಾರೆ. ಸಚಿವರೇ ನಮ್ಮ ಜಿಲ್ಲೆಯ ಅಭ್ಯರ್ಥಿಗಳಿಗೆ ಶರಣಾಗುವಂತೆ ಹೇಳಿದ್ದಾರೆ. ಇದುವರೆಗೂ 50ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದು, ಅವರ ಹೇಳಿಕೆ, ಬಂಧನವಾಗಿರುವ ಎಡಿಜಿಪಿ ಅವರ ಹೇಳಿಕೆಯನ್ನು ಪೂರ್ಣಪ್ರಮಾಣದಲ್ಲಿ ತನಿಖಾಧಿಕಾರಿಗಳು ದಾಖಲೆ ಮಾಡಿಕೊಳ್ಳುತ್ತಿಲ್ಲ. ತನಿಖೆಯಲ್ಲಿ ಆಂತರಿಕವಾಗಿ ಏನೆಲ್ಲಾ ಆಗುತ್ತಿದೆ ಎಂಬುದು ಗೊತ್ತಿದೆ. ಇಂತಹ ತನಿಖೆಯಿಂದ ನ್ಯಾಯ ಸಿಗುವುದಿಲ್ಲ. ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದರು.

ರಾಜ್ಯದಲ್ಲಿ ಯಾವುದೇ ಯೋಜನೆಗಳು ಜಾರಿಯಾಗುತ್ತಿಲ್ಲ. ಬಿಜೆಪಿ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಅವರ ಕತೆ ಮುಕ್ತಾಯದ ಹಂತದಲ್ಲಿದ್ದು, ಜನ ಅವರನ್ನು ಅಧಿಕಾರದಿಂದ ಕಿತ್ತೊಗೆಯಲಿದ್ದಾರೆ ಎಂದರು.

ಬಿಜೆಪಿ ಶಾಸಕರ ಅಧ್ಯಯನ ಪ್ರವಾಸ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಧ್ಯಯನದ ಹೆಸರಲ್ಲಿ ಬಿಜೆಪಿ ಶಾಸಕರು ಪ್ರವಾಸ ಮಾಡುತ್ತಿದ್ದಾರೆ. ಇದು ಅವರ ಇಚ್ಛೆ. ನಾವು ನಮ್ಮ ಶಾಸಕರನ್ನು ಅಧ್ಯಯನ ಪ್ರವಾಸಕ್ಕೆ ಕಳುಹಿಸಲು ಮುಂದಾದಾಗ ಅವರು ಟೀಕಿಸಿದ್ದರು’ ಎಂದು ತಿಳಿಸಿದರು.

ಸಿದ್ದರಾಮೋತ್ಸವ ಕಾರ್ಯಕ್ರಮ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾಯಕರು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಅದು ಅವರ ವೈಯಕ್ತಿಕ ಹಾಗೂ ಅಭಿಮಾನಿಗಳ ಇಚ್ಛೆಗೆ ಬಿಟ್ಟದ್ದು. ಪಕ್ಷಕ್ಕೆ ಏನೆಲ್ಲಾ ಕಾರ್ಯಕ್ರಮಗಳು ಅನುಕೂಲವಾಗುತ್ತವೋ ಅದಕ್ಕೆ ಪಕ್ಷದ ಅಧ್ಯಕ್ಷನಾಗಿ ನಾನು ಬೆಂಬಲವಾಗಿ ನಿಲ್ಲುತ್ತೇನೆ. ಸೋನಿಯಾ ಗಾಂಧಿ ಅವರು ಆಗಸ್ಟ್ 15 ರಂದು ದೇಶದ 75ನೇ ಸ್ವಾತಂತ್ರ್ಯೋತ್ಸವ ಆಚರಣೆ ವಿಚಾರವಾಗಿ ನನಗೆ ಜವಾಬ್ದಾರಿ ವಹಿಸಿದ್ದು, ಕಾಂಗ್ರೆಸ್ ನಾಯಕರು, 75 ಸಾವಿರದಿಂದ 1 ಲಕ್ಷ ಕಾರ್ಯಕರ್ತರು ಬೆಂಗಳೂರಿನಲ್ಲಿ ಮೆರವಣಿಗೆಯನ್ನು ಮಾಡಲಿದ್ದಾರೆ. ಇದರ ಜತೆಗೆ 75 ಕಿ.ಮೀ ಪಾದಯಾತ್ರೆ ಮಾಡಲು ತಿಳಿಸಿದ್ದಾರೆ. ಇದನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಸಲು ಸೂಚಿಸಲಾಗಿದ್ದು, ಈ ವಿಚಾರವಾಗಿ ನಾಳೆ ಸಭೆ ಕರೆದಿದ್ದೇನೆ. ನಾನು ಪಕ್ಷದ ಹೈಕಮಾಂಡ್ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದೇನೆ ಎಂದರು.

Advertisement

ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು, ಸಂವಿಧಾನವನ್ನು ನೀಡಿದೆ. ಈ ಕಾರ್ಯಕ್ರಮದ ಆಚರಣೆ ನಮ್ಮ ಕರ್ತವ್ಯ. ಈ ಕಾರ್ಯಕ್ರಮದ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರವನ್ನು ಎಲ್ಲರಿಗೂ ತಿಳಿಸಬೇಕಿದೆ. ಉಳಿದಂತೆ ನಾಯಕರ ಹುಟ್ಟುಹಬ್ಬ ಆಚರಣೆ ವಿಚಾರವಾಗಿ ನನಗೆ ಯಾವುದೇ ಆಕ್ಷೇಪವಿಲ್ಲ’ ಎಂದರು.

ಹೈಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಬಗ್ಗೆ ರಾಹುಲ್ ಗಾಂಧಿ ಅವರ ಟ್ವೀಟ್ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ರಾಹುಲ್ ಗಾಂಧಿ ಅವರು ಸರಿಯಾಗಿ ಹೇಳಿದ್ದಾರೆ. ಈ ದೇಶದಲ್ಲಿ ನ್ಯಾಯಾಂಗದ ರಕ್ಷಣೆಯಾಗಬೇಕು. ನ್ಯಾಯಾಧೀಶರು ಭ್ರಷ್ಟಾಚಾರ ನಿಗ್ರಹದ ವಿಚಾರವಾಗಿ ಧ್ವನಿ ಎತ್ತಿ, ಮುಕ್ತವಾದ ತನಿಖೆ ಆಗಬೇಕು ಎಂದು ಹೇಳಿದ್ದಾರೆ. ಹಗರಣಗಳಲ್ಲಿ ಸರ್ಕಾರ ಸಂಪೂರ್ಣವಾಗಿ ಭಾಗಿಯಾಗಿದೆ ಎಂದು ಅವರಿಗೂ ಗೊತ್ತಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ನ್ಯಾಯವನ್ನು ಎತ್ತಿ ಹಿಡಿಯಬೇಕಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next