Advertisement

ಪಿಎಸ್ಐ ಹಗರಣದಲ್ಲಿ ಮಾಜಿ ಸಿಎಂ ಮಗನ ಕೈವಾಡವೇನು? ಕಾಂಗ್ರೆಸ್ ಗೆ ಅಸ್ತ್ರವಾದ ಯತ್ನಾಳ್ ಆರೋಪ

10:59 AM Oct 05, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಸಂಚಲನ ಉಂಟು ಮಾಡಿದ್ದ ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ ಸಂಬಂಧಿಸಿದಂತೆ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ನಾಯಕರ ವಿರುದ್ಧವೇ ಕಿಡಿಕಾರಿದ್ದು, ಕಾಂಗ್ರೆಸ್ ಗೆ ಅಸ್ತ್ರ ಸಿಕ್ಕಂತಾಗಿದೆ. ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಪುತ್ರನ ನೇರ ಕೈವಾಡವಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದು, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಕಾಂಗ್ರೆಸ್ ನ ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

Advertisement

ಯತ್ನಾಳ್‌ರ ಈ ಆರೋಪ ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಈ ಆರೋಪ ಮಾಡಿದ್ದಾರೆ. ಆದರೂ ಸಿಐಡಿ ಅಧಿಕಾರಿಗಳು ಯತ್ನಾಳ್ ಆರೋಪದ ಬಗ್ಗೆ ಯಾಕೆ ತನಿಖೆ ನಡೆಸುತ್ತಿಲ್ಲ? ಕಳೆದ ಅಧಿವೇಶನದಲ್ಲಿ ಪಿಎಸ್ಐ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ನಾವು ಒತ್ತಾಯಿಸಿದ್ದೆವು. ಆದರೆ ಯತ್ನಾಳ್ ಈ ಹಗರಣದ ಕಿಂಗ್‌ಪಿನ್‌ ಮಾಜಿ ಸಿಎಂ ಪುತ್ರ ಎಂದಿದ್ದಾರೆ. ಜೊತೆಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ನಮ್ಮ ಒತ್ತಾಯಕ್ಕಂತೂ ಈ ಸರ್ಕಾರ ಒಪ್ಪಲಿಲ್ಲ. ಕೊನೆಯ ಪಕ್ಷ ಯತ್ನಾಳ್ ಒತ್ತಾಯಕ್ಕಾದರೂ ಬೆಲೆ ಕೊಡಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಕ್ಯಾಚ್ ಹಿಡಿದು ಬೌಂಡರಿ ಗೆರೆ ತುಳಿದ ಸಿರಾಜ್ ಗೆ ನಿಂದಿಸಿದ ದೀಪಕ್; ವಿಡಿಯೋ ನೋಡಿ

ಯತ್ನಾಳ್ ಆರೋಪ ಗಮನಿಸಿದರೆ ಪಿಎಸ್ಐ ಹಗರಣದಲ್ಲಿ ಬಂಧಿತರಾಗಿರುವ ಅಮೃತ್ ಪೌಲ್ ಹರಕೆಯ ಕುರಿಯಂತೆ ಭಾಸವಾಗುತ್ತಿದೆ. ಈ ಹಗರಣದ ನಿಜವಾದ ಕಿಂಗ್‌ಪಿನ್ ಮಾಜಿ ಮುಖ್ಯಮಂತ್ರಿಯ ಮಗ. ಹಾಗಾದರೆ ಅದು ಯಾರು ಎಂಬುದೇ ಯಕ್ಷಪ್ರಶ್ನೆ? ಈ ಸತ್ಯ ಜನರಿಗೆ ಗೊತ್ತಾಗಬೇಕು. ಆ ಸತ್ಯ ತಿಳಿಯಬೇಕಾದರೆ ಒಂದೋ‌ ನ್ಯಾಯಾಂಗ ತನಿಖೆಯಾಗಬೇಕು, ಇಲ್ಲವೆ ಸಿಬಿಐ ತನಿಖೆಯಾಗಬೇಕು. ಪಿಎಸ್ಐ ನೇಮಕಾತಿಯ ಅಧಿಸೂಚನೆ ಹೊರಟಿದ್ದು ಇದೇ ಸರ್ಕಾರದ ಅವಧಿಯಲ್ಲಿ. ಹಗರಣ ನಡೆದಿರುವುದೂ ಇದೇ ಅವಧಿಯಲ್ಲಿ. ಈ ಅವಧಿಯಲ್ಲೇ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಪದವಿ ಬಿಟ್ಟು ಮಾಜಿಯಾಗಿದ್ದಾರೆ. ಯತ್ನಾಳ್ ಆರೋಪ ಮಾಡುತ್ತಿರುವುದು ಬಿಎಸ್ ವೈ ಪುತ್ರನ ವಿರುದ್ಧವೇ? ಬೆಂಕಿಯಿಲ್ಲದೆ ಹೊಗೆ ಬರಲು ಸಾಧ್ಯವಿಲ್ಲವೆಂಬಂತೆ ಯತ್ನಾಳ್ ಸುಮ್ಮನೆ ಆರೋಪ ಮಾಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.

ಪಿಎಸ್ಐ ಹಗರಣ ಈ ಸರ್ಕಾರದ ಅತಿ ದೊಡ್ಡ ಕಳಂಕ. ಸಿಐಡಿ ಮೂಲಕ ಕಾಟಾಚಾರದ ತನಿಖೆ ಮಾಡಿಸಿ ತನ್ನ ಮೇಲಿರುವ ಕಳಂಕ ತೊಳೆದುಕೊಳ್ಳಲು ಈ ಸರ್ಕಾರ ಯತ್ನಿಸುತ್ತಿದೆ. ಆದರೆ ಈ ಸರ್ಕಾರದ ಭಾಗವಾಗಿರುವವರೇ ಈ ಹಗರಣದಲ್ಲಿ ಪ್ರಭಾವಿಗಳ ಭಾಗಿಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಈ ಸರ್ಕಾರ ಪ್ರಾಮಾಣಿಕವಾಗಿದ್ದರೆ ಈಗಲಾದರೂ ಪಾರದರ್ಶಕ ತನಿಖೆ ನಡೆಸಲಿ ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next