ಕಲಬುರಗಿ: ಪಿಎಸ್ಐ ನೇಮಕಾತಿಯ ಪರೀಕ್ಷೆಯಲ್ಲಿ ಅಕ್ರಮ ದೂರು ಕೇಳಿ ಬಂದ ತಕ್ಷಣ ಸರ್ಕಾರ ಸಿಐಡಿ ತನಿಖೆಗೆ ವಹಿಸಲಾಗಿದೆ. ಅಕ್ರಮದಲ್ಲಿ ಯಾರು ಎಷ್ಟೇ ಪ್ರಭಾವಿಗಳಿದ್ದರೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಿಜೆಪಿಯ ಸಂಘಟನಾ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ನಿಮಿಷವೂ ವ್ಯರ್ಥ ಮಾಡದೇ ತನಿಖೆ ಕಾರ್ಯಾಚರಣೆ ಕೈಗೊಳ್ಳುವಂತೆ ಸಿಐಡಿಗೆ ಸೂಚಿಸಲಾಗಿದೆ ಎಂದರು.
ಸಿಐಡಿ ತಂಡವು ಅಕ್ರಮ ನಡೆದಿದೆ ಎನ್ನಲಾದ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಲ್ಲದೇ ಅಕ್ರಮದಲ್ಲಿ ಪಾಲ್ಗೊಂಡವರನ್ನು ಸಹ ಬಂಧಿಸಲಾಗಿದೆ. ಗುರುವಾರ ಅಫಜಲಪುರ ಕ್ಷೇತ್ರದ ಶಾಸಕ ಎಂ.ವೈ.ಪಾಟೀಲ್ ಗನಮ್ಯಾನ್ ಸೇರಿ ಇಬ್ಬರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಒಟ್ಟಾರೆ ಎಲ್ಲ ಆಯಾಮಗಳಿಂದ ಆಳವಾಗಿ ತನಿಖೆ ನಡೆಸುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಸಿಎಂ ತಿಳಿಸಿದರು.
ಮಧ್ಯಂತರ ವರದಿಗೆ ಸೂಚನೆ
ಪಿಎಸ್ಐ ನೇಮಕಾತಿಯ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸುತ್ತಿದ್ದು, ಹಲವರನ್ನು ಈಗಾಗಲೇ ಬಂಧಿಸಿದೆ. ಇಲ್ಲಿಯವರೆಗೆ ಆಗಿರುವ ತನಿಖೆಯ ಕುರಿತಾಗಿ ಮಧ್ಯಂತರ ವರದಿ ನೀಡುವಂತೆ ಸಿಐಡಿಗೆ ಸೂಚಿಸಲಾಗಿದೆ. ಮಧ್ಯಂತರ ವರದಿ ನಂತರ ಮರು ಪರೀಕ್ಷೆ ನಡೆಸಬೇಕೋ ಇಲ್ಲವೇ ಎಂಬುದನ್ನು ನಿರ್ಧರಿಸಲಾಗುವುದು. ಅದೇ ರೀತಿ ಪರೀಕ್ಷೆ ಸುಧಾರಣೆ ಜತೆಗೇ ತನಿಖೆಯನ್ನು ಸಿಐಡಿಯಿಂದಲೇ ಮುಂದುವರೆಸಬೇಕು ಇಲ್ಲವೇ ಸಿಬಿಐ ಮತ್ತು ನ್ಯಾಯಾಂಗ ತನಿಖೆ ನಡೆಸಬೇಕೆಂಬುದನ್ನು ಸಹ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟ ಪಡಿಸಿದರು.
ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ, ಕೆ.ಕೆ.ಅರ್.ಡಿ.ಬಿ ಅಧ್ಯಕ್ಷ ದತ್ತಾತ್ರೆಯ ಪಾಟೀಲ ರೇವೂರ, ಶಾಸಕರಾದ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ತಿನ ಶಾಸಕರಾದ ಶಶಿಲ್ ಜಿ. ನಮೋಶಿ, ಸುನೀಲ್ ವಲ್ಯಾಪೂರೆ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರು, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮಾಜಿ ಎಂ.ಎಲ್.ಸಿ. ಅಮರನಾಥ ಪಾಟೀಲ ಇದ್ದರು.