ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಆರೋಪದ ಪ್ರಕರಣದಲ್ಲಿ ನ್ಯಾಯಾಲಯದ ಮೆಟ್ಟಿಲೇರಿರುವ 145 ಅಭ್ಯರ್ಥಿಗಳ ಪೈಕಿ ಎಷ್ಟು ಅಭ್ಯರ್ಥಿಗಳು ಯಾವ ರೀತಿಯಲ್ಲಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂಬ ಬಗ್ಗೆ ಸ್ಪಷ್ಟ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಹೊಸದಾಗಿ ಲಿಖಿತ ಪರೀಕ್ಷೆ ನಡೆಸಲು ಸರಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಕೋರಿ ವಸಂತ ನಾಯಕ್ ಸೇರಿ 100ಕ್ಕೂ ಹೆಚ್ಚು ಅಭ್ಯರ್ಥಿಗಳು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಜಿ. ನರೇಂದರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲರು ವಾದ ಮಂಡಿಸಿ, ಈ ಪ್ರಕರಣದಲ್ಲಿ ತನಿಖೆ ಪ್ರಾರಂಭವಾಗಿ ಎ. 9ಕ್ಕೆ ಒಂದು ವರ್ಷ ಆಗಿದೆ. ಆದರೆ ಅರ್ಜಿದಾರರ ಪೈಕಿ ಯಾರೊಬ್ಬರ ವಿರುದ್ಧವೂ ಆರೋಪ ಅಥವಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂಬ ಸಂದೇಹವೂ ಇಲ್ಲ. ಆದರೂ ಸರಕಾರ ಸಾರಾಸಗಟಾಗಿ ಎಲ್ಲ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನೂ ರದ್ದುಗೊಳಿಸಿರುವುದು ಅನ್ಯಾಯ. ಆದ್ದರಿಂದ ಆರೋಪಗಳೇ ಇಲ್ಲದ ಅರ್ಜಿದಾರ ಅಭ್ಯರ್ಥಿಗಳು ತನಿಖೆಯ ಅಂತಿಮ ವರದಿಗೆ ಬದ್ಧರಾಗಿರತಕ್ಕದ್ದು ಎಂಬ ಷರತ್ತಿನ ಮೇಲೆ ಅವರನ್ನು ಉಳಿಸಿಕೊಳ್ಳಲು ನಿರ್ದೇಶಿಸಬೇಕು ಎಂದು ಕೋರಿದರು.
ಇದಕ್ಕೆ ಆಕ್ಷೇಪಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ಹಿರಿಯ ಅಧಿಕಾರಿಗಳು ಪ್ರಾಮಾಣಿಕವಾಗಿ ಸಮಗ್ರ ತನಿಖೆ ನಡೆಸುತ್ತಿದ್ದು, ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಬ್ಲೂ ಟೂತ್ ಬಳಕೆ ಮಾಡಿ ಹೊರಗಿನಿಂದ ಅಭ್ಯರ್ಥಿಗಳಿಗೆ ಉತ್ತರ ಹೇಳಿಕೊಟ್ಟಿರುವುದು ಮತ್ತು ನೇಮಕಾತಿ ವಿಭಾಗದÇÉೇ ಒಎಂಆಆರ್ ಶೀಟ್‌ಗಳನ್ನು ತಿದ್ದಿರುವುದರ ತನಿಖೆ ಮುಂದುವರಿದಿದೆ. ಒಎಂಆರ್ ಶೀಟುಗಳಿಗೆ ಸಂಬಂಧಿಸಿದಂತೆ ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಪಡೆಯಲಾಗಿದೆ. ಬ್ಲೂ ಟೂತ್ ಬಳಕೆ ಮಾಡಿ ನಕಲು ಮಾಡಿರುವುದರ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯ
ಪೀಠ, ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ನೋಡಲಾಗದು. ಅಮಾಯಕರ ದೃಷ್ಟಿಯಿಂದಲೂ ಪರಿಶೀಲನೆ ಮಾಡಬೇಕಿದೆ. ಬೇಕಾದರೆ ಅರ್ಜಿದಾರರ ವಿರುದ್ಧ ಪ್ರಾಥಮಿಕ ತನಿಖೆ ನಡೆಸಿ. ಆದರೆ ನಾವು ಈ ಸಂಬಂಧ ಯಾವುದೇ ನ್ಯಾಯಾಂಗ ಆದೇಶ ಮಾಡಲು ಹೋಗುವುದಿಲ್ಲ. ಆದರೂ ಅರ್ಜಿದಾರರ ವಿಷಯದಲ್ಲಿ ನಿಮ್ಮ ಸ್ಪಷ್ಟ ನಿಲುವು ಪ್ರದರ್ಶಿಸಬೇಕು. ಒಂದು ವೇಳೆ ಅರ್ಜಿದಾರರಲ್ಲಿ ಯಾರಾದರೂ ಅಕ್ರಮದಲ್ಲಿ ಭಾಗಿಯಾಗಿದ್ದರೆ ಅಂತಹವರ ವಿರುದ್ಧ ತನಿಖೆ ಮುಂದುವರಿಸಬಹುದು. ಹೀಗಾಗಿ ಈ ಪ್ರಕರಣದಲ್ಲಿ ತನಿಖಾಧಿಕಾರಿಗಳು ಕೈಗೊಂಡಿರುವ ಪ್ರಗತಿ ವರದಿಯನ್ನು ಜೂ. 15ರೊಳಗೆ ನ್ಯಾಯಾಯಲಕ್ಕೆ ಸಲ್ಲಿಸಿ ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.