ಕಲಬುರಗಿ: ಪಿಎಸ್ಐ ನೇಮಕಾತಿಯ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಮಹತ್ತರ ಹೆಜ್ಜೆ ಇಟ್ಟಿರುವ ಸಿಐಡಿ, ಗುರುವಾರ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಬಂಧಿಸಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸೂಗುರು ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ, ಬೆರಳಚ್ಚು ವಿಭಾಗದ ಸಿಪಿಐ ಆನಂದ ಮೇತ್ರೆ ಬಂಧಿತ ಆರೋಪಿಗಳು. ಮಲ್ಲಿಕಾರ್ಜುನ ಸಾಲಿ ಈ ಹಿಂದೆ ಆಳಂದ ವಿಭಾಗದ ಡಿಎಸ್ಪಿಯಾಗಿದ್ದರು. ಇಲ್ಲಿಯವರೆಗೆ ಬಂಧಿತರ ಸಂಖ್ಯೆ 30 ದಾಟಿದೆ.
ನಿನ್ನೆಯಿಂದ ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಇಂದು ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿ, ಈ ಇಬ್ಬರು ಅಧಿಕಾರಿಗಳನ್ನು ಬಂಧಿಸಿ, ವೈದ್ಯಕೀಯ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.
ಇದನ್ನೂ ಓದಿ: ರಮೇಶ ಜಾರಕಿಹೊಳಿ ವಿರುದ್ಧ ಮತ್ತೆ ಹೋರಾಟ ಶುರು ಮಾಡುತ್ತಾ ಕಾಂಗ್ರೆಸ್?
ಇಲ್ಲಿ ಯವರೆಗೆ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್‌ಗಳು, ಅಭ್ಯರ್ಥಿಗಳು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಅಭ್ಯರ್ಥಿಗಳು ಬಂಧನವಾಗಿದ್ದರೆ ಇಂದು ಹಿರಿಯ ಪೊಲೀಸ್ ಅಧಿಕಾರಿಗಳು ಬಂಧನವಾಗಿರುವುದನ್ನು ನೋಡಿದರೆ ಈ ಪ್ರಕರಣ ದಲ್ಲಿ ಇನ್ನೂ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿರುವುದು ಸಾಬೀತು ಪಡಿಸುವಂತಾಗಿದೆ. ಇದಲ್ಲದೆ ಕಲ್ಯಾಣ ಕರ್ನಾಟಕ ಭಾಗದ ಹಿರಿಯ ಶಾಸಕರ ಹಾಗೂ ಶಾಸಕರ ಸಹೋದರ ಹೆಸರೂ ಸಹ ಕೇಳಿ ಬರುತ್ತಿದೆ. ಒಟ್ಟಾರೆ ಈ ಅಕ್ರಮ ಬಗೆದಷ್ಟು ಆಳವಾಗುತ್ತಿದೆ.