Advertisement

ಪಿಎಸ್‌ಐ ಅಕ್ರಮ: ಸಾಕ್ಷ್ಯನಾಶಕ್ಕೆ ನದಿಗೆ ಮೊಬೈಲ್‌ ಎಸೆದ

01:25 AM May 11, 2022 | Team Udayavani |

ಕಲಬುರಗಿ: ಪಿಎಸ್‌ಐ ಅಕ್ರಮ ಬಯಲಾಗುತ್ತಿದ್ದಂತೆ ತಾನೆಲ್ಲಿ ಸಿಕ್ಕಿ ಬೀಳುತ್ತೇನೋ ಎಂದು ಹೆದರಿದ್ದ ಬ್ಲೂಟೂತ್‌ ಕಿಂಗ್‌ಪಿನ್‌ ಮಂಜುನಾಥ ಮೇಳಕುಂದಿ ತಾನು ಬಳಕೆ ಮಾಡಿದ್ದ ಮೊಬೈಲ್‌ ಅನ್ನು ಆಳಂದ ತಾಲೂಕಿನ ಅಮರ್ಜಾ ನದಿಗೆ ಎಸೆದಿರುವುದು ಬಯಲಾಗಿದೆ.

Advertisement

ನದಿಗೆ ಎಸೆದಿದ್ದ ಮೊಬೈಲ್‌ ಅನ್ನು ವಶಪಡಿಸಿಕೊಳ್ಳಲು ಸೋಮವಾರ ಸಿಐಡಿ ಪೊಲೀಸರು ತೀವ್ರ ಪ್ರಯತ್ನ ಮಾಡಿದ್ದಾರೆ.

ಇಬ್ಬರು ಮುಳುಗು ತಜ್ಞರನ್ನು ಕರೆಯಿಸಿ ಅಮರ್ಜಾ ನದಿಯಲ್ಲಿ ಮೊಬೈಲ್‌ ಎಸೆದಿರುವ ಜಾಗದಲ್ಲಿ ಹುಡುಕಾಡಿದರೂ ಸಿಕ್ಕಿಲ್ಲ. ಬಂಧನಕ್ಕೂ ಮುನ್ನ ಇದೇ ಸೈಟ್‌ನಲ್ಲಿ ಮಂಜುನಾಥ ಸಹಾಯಕ ಎಂಜಿನಿಯರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದ.

ಮಂಜುನಾಥ ಮೇಳಕುಂದಿ ಸ್ಥಳ ಮಹಜರ್‌
ಮಂಗಳವಾರ ಕೂಡ ಸಿಐಡಿ ಪೊಲೀಸರು ಜ್ಞಾನ ಜ್ಯೋತಿ ಶಾಲೆ, ಹಣದ ವ್ಯವಹಾರ ಮಾಡಿದ್ದಾಗಿ ಒಪ್ಪಿಕೊಂಡಿದ್ದ ಪಿ ಆ್ಯಂಡ್‌ ಟಿ ವಸತಿ ಸಮುತ್ಛಯದ ಬಳಿ ಇರುವ ದಿವ್ಯಾ ಹಾಗರಗಿ ಮನೆಯಲ್ಲಿ ಮಂಜುನಾಥ ಮೇಳಕುಂದಿಯಿಂದ ಮಹಜರ್‌ ನಡೆಸಿದರು. ಈ ವೇಳೆ ತಾನು ಓಡಾಡಿದ್ದ, ವ್ಯವಹಾರ ನಡೆಸಿದ್ದು ಇದೇ ಜಾಗ ಎಂದು ಮೇಳಕುಂದಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಆಸೆ ಪಟ್ಟು ಖರೀದಿಸಿದ ಮನೆಯೇ ಮುಳುವಾಯಿತೇ?
ಮೂರು ವರ್ಷಗಳ ಹಿಂದೆ ಆಸೆ ಪಟ್ಟು ಖರೀದಿಸಿದ ಮನೆ ಈಗ ಕಂಟಕವಾಗಿದೆ ಎಂದು ಅಧಿಕಾರಿಗಳ ಬಳಿ ಖುದ್ದು ಮಂಜುನಾಥನೇ ಹೇಳಿಕೊಂಡಿದ್ದಾನೆ. ಒಂದು ಕೋಟಿ ರೂ.ಗೂ ಅಧಿಕ ಹಣ ನೀಡಿ ಖರೀದಿಸಿದ ಮನೆ ವಾಸ್ತು ದೋಷದಿಂದ ಕೂಡಿರುವುದು ಚಿಂತೆಗೀಡು ಮಾಡಿದೆಯಂತೆ. ಜಯನಗರದ ಎಂಜಿನಿಯರ್ ಕಾಲನಿಯಲ್ಲಿರುವ ಡುಪ್ಲೆಕ್ಸ್‌ ಮನೆಯನ್ನು ಸರಕಾರಿ ಅಧಿಕಾರಿಯೊಬ್ಬರು ಕಟ್ಟಿಸಿದ್ದರು. ವಾಸ್ತು ದೋಷ ಗೊತ್ತಾಗುತ್ತಿದ್ದಂತೆ ಯಾರಿಗೂ ವಿಷಯ ತಿಳಿಸದೆ ಮನೆಯನ್ನೇ ಮಾರಿದ್ದರು. ಅದನ್ನು ಮೇಳಕುಂದಿ ಖುಷಿಯಿಂದಲೇ ಖರೀದಿಸಿದ್ದ.

Advertisement
Advertisement

Udayavani is now on Telegram. Click here to join our channel and stay updated with the latest news.

Next