ಕಲಬುರಗಿ: ಪಿಎಸ್ಐ ನೇಮಕಾತಿಯ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿಐಡಿ ಅಧಿಕಾರಿಗಳು ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಿಸುವ ಮೂಲಕ ತನಿಖೆ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ದೂರಿನ ಅನ್ವಯ ವಿರೇಶ ಎಂಬಾತ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಸಿಐಡಿ ಡಿವೈಎಸ್ ಪಿ ಪ್ರಕಾಶ ರಾಠೋಡ ನೇತೃತ್ವದ ತಂಡ ಕಲಬುರಗಿ ಗೆ ಆಗಮಿಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ವಿರೇಶ ಕುಳಿತ ನಗರದ ಗೋಕುಲ ನಗರದ ಪರೀಕ್ಷಾ ಕೇಂದ್ರ ಸೇರಿದಂತೆ ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಲಾಗಿದೆ.
ಓಎಂಆರ್ ಶೀಟ್ ನಲ್ಲಿ ವಿರೇಶ ಕೇವಲ 21 ಪ್ರಶ್ನೆಗೆ ಉತ್ತರ ಬರೆದಿದ್ದರೆ ನಂತರ ನೇಮಕಾತಿ ವಿಭಾಗದಿಂದ ಪಡೆಯಲಾದ ಪ್ರತಿಯಲ್ಲಿ ನೂರಕ್ಕೆ ನೂರು ಪ್ರಶ್ನೆಗಳಿಗೆ ಉತ್ತರಿಸಲಾಗಿತ್ತು.ಇದೇ ರೀತಿಯಲ್ಲಿ ಇತರ ಅಭ್ಯರ್ಥಿಗಳಲ್ಲೂ ಅಕ್ರಮದ ವಾಸನೆ ಕಂಡು ಬಂದಿದೆ. ಕೆಲವರಿಗೆ ಅವರ ಹೆಸರು ಸರಿಯಾಗಿ ಬರೆಯಲಿಕ್ಕೆ ಬಾರದವರು ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದಿದ್ದಾರೆ ಎನ್ನಲಾಗುತ್ತಿದೆ. ಒಟ್ಟಾರೆ ಒಬ್ಬನನ್ನು ಬಂಧಿಸುವ ಮೂಲಕ ದಿಟ್ಟ ಕ್ರಮಕ್ಕೆ ಮುಂದಾಗಲಾಗಿದೆ.
ಇದನ್ನೂ ಓದಿ : ಕೆಎಂಎಫ್ ಅಗ್ರ ಸೇವೆ : ಬಾಲಚಂದ್ರ ಜಾರಕಿಹೊಳಿಗೆ ಅಮಿತ್ ಶಾರಿಂದ ಪ್ರಶಸ್ತಿ
ಕಳೆದ ಅಕ್ಟೋಬರ್ ತಿಂಗಳಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆದಿತ್ತು. ಆದರೆ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬುದರ ಕುರಿತಾಗಿ ದೂರು ಬಂದಿರುವ ಹಿನ್ನೆಲೆಯಲ್ಲಿ ಈಗ ಸಿಐಡಿ ತನಿಖೆ ನಡೆಸುತ್ತಿದೆ. ತನಿಖೆ ನಂತರ ಅಕ್ರಮದ ಮತ್ತಷ್ಟು ಆಯಾಮಗಳು ಹೊರ ಬರುವ ಸಾಧ್ಯತೆ ಗಳಿವೆ.