ಶ್ರೀನಗರ: ಕಳೆದ ಆರು ತಿಂಗಳಿಂದ ಗೃಹ ಬಂಧನದಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರ ಬಂಧನ ಅವಧಿಯನ್ನು ಮುಂದುವರಿಸಲಾಗಿದೆ.
ಉಭಯರ ಬಂಧನದ ಅವಧಿ ಮುಗಿಯಲು ಕೆಲವೇ ಗಂಟೆಗಳಿರುವಾಗ ಸಾರ್ವಜನಿಕ ಸುರಕ್ಷತಾ ಕಾಯ್ದೆ ಹೇರಿ ಅವರ ಬಂಧನ ಅವಧಿ ವಿಸ್ತರಿಸಲಾಗಿದೆ.
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಸಂದರ್ಭದಲ್ಲಿ ಭದ್ರತೆಯ ದೃಷ್ಟಿಯಿಂದ ಇವರಿಬ್ಬರನ್ನೂ ಗೃಹ ಬಂಧನದಲ್ಲಿ ಇರಿಸಲಾಗಿತ್ತು.
ಗುರುವಾರ ರಾತ್ರಿ ಒಮರ್ ಮನೆಗೆ ಮೆಜುಸ್ಟ್ರೇಟ್ ಒಬ್ಬರು ಪೊಲೀಸ್ ಅಧಿಕಾರಿಗಳೊಂದಿಗೆ ಬಂದು ವಾರಂಟ್ ನೀಡಿದ್ದಾರೆ. ಅದೇ ರೀತಿ ಸರ್ಕಾರಿ ಅತಿಥಿಗೃಹದಲ್ಲಿರುವ ಮೆಹಬೂಬಾ ಮುಫ್ತಿ ಅವರಿಗೂ ವಾರಂಟ್ ನೀಡಲಾಗಿದೆ.
ಇದೇ ರೀತಿ ನ್ಯಾಶನಲ್ ಕಾನ್ಫರೆನ್ಸ್ ಪ್ರಧಾನ ಕಾರ್ಯದರ್ಶಿ ಆಲಿ ಮೊಹಮ್ಮದ್ ಸಾಗರ್ ಮತ್ತು ಪಿಡಿಪಿ ನಾಯಕ ಸರ್ತಾಜ್ ಮಾದಾನಿಗೂ ವಾರಂಟ್ ನೀಡಲಾಗಿದೆ. ಇವರಿಬ್ಬರೂ ಕಳೆದ ಆರು ತಿಂಗಳಿನಿಂದ ಗೃಹ ಬಂಧನದಲ್ಲಿದ್ದಾರೆ.