ಲಕ್ಷ್ಮೇಶ್ವರ: ಕೋವಿಡ್ ಸೋಂಕು ದಿನೇ ದಿನೇ ಹೆಚ್ಚುತ್ತಿದ್ದು, ಸೋಂಕಿತರ ಆರೋಗ್ಯ ರಕ್ಷಣೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲ ರೀತಿ ಸೌಲಭ್ಯ ಕಲ್ಪಿಸುತ್ತಿವೆ. ಜನರು ಮಾತ್ರ ಸಾಮಾಜಿಕ ಅಂತರ ಕಾಯುವುದು, ಮಾಸ್ಕ್ ಧರಿಸುವುದು, ಆರೋಗ್ಯ ಪರೀಕ್ಷೆಗೊಳಪಡುವುದನ್ನು ಮರೆಯಬಾರದು ಎಂದು ಶಾಸಕ ರಾಮಣ್ಣ ಲಮಾಣಿ ಮನವಿ ಮಾಡಿದರು.
ಅವರು ಗುರುವಾರ ಪುರಸಭೆ ಸಭಾಭವನದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಮುಂಜಾಗ್ರತಾ ಕ್ರಮ ಮತ್ತು ಕಾರ್ಯಯೋಜನೆಗಳ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು. ಅಧಿಕಾರಿಗಳು ಅಂತರ ರಾಜ್ಯ, ಜಿಲ್ಲೆಯಿಂದ ಬಂದವರ ಆರೋಗ್ಯ ಪರೀಕ್ಷೆ, ಕ್ವಾರಂಟೈನ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದರು.
ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಉದ್ಯೋಗ ಕಲ್ಪಿಸಬೇಕು. ಬಿತ್ತನೆ ಹಂಗಾಮು ಪ್ರಾರಂಭವಾಗುವ ಮೊದಲೇ ಅವಶ್ಯಕ ಬೀಜ, ಗೊಬ್ಬರ, ಕೃಷಿ ಪರಿಕರಗಳನ್ನು ದಾಸ್ತಾನು ಮಾಡಿಕೊಳ್ಳಬೇಕು. ಪೊಲೀಸ್ ಇಲಾಖೆಯವರು ಲಾಕ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಇನ್ನಷ್ಟು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಬೇಕಾದ ಎಲ್ಲ ಸಹಾಯ-ಸಹಕಾರ ನೀಡಲು ಸರ್ಕಾರ ಸದಾ ಸಿದ್ಧವಿದೆ. ಇಡೀ ಜಗತ್ತೇ ಕೋವಿಡ್ ಮಾರಿಯ ಅಟ್ಟಹಾಸಕ್ಕೆ ನಲುಗಿದ್ದರೂ ಜನರ ಆರೋಗ್ಯದ ದೃಷ್ಟಿಯಿಂದ ಕೋವಿಡ್ ವಿರುದ್ಧದ ಹೋರಾಟದಲ್ಲಿ ತಮ್ಮನ್ನೇ ಸಮರ್ಪಿಸಿಕೊಂಡ ಕೋವಿಡ್ ಸೇನಾನಿಗಳ, ಅಧಿಕಾರಿಗಳ ಸೇವಾ ಮನೋಭಾವ ಅತ್ಯಂತ ಶ್ಲಾಘನೀಯ. ಇನ್ನಷ್ಟು ದಿನ ಈ ಸೇವೆ ಹೀಗೆ ಮುಂದುವರಿಯಲಿ ಎಂದರು.
ತಹಶೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ, ತಾಪಂ ಇಒ ಡಾ| ಎನ್.ಎಚ್. ಓಲೇಕಾರ, ಸಹಾಯಕ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಕುಂಬಾರ ಅವರು ಕೈಗೊಂಡ ಕಾರ್ಯಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ತಾಲೂಕು ವೈದ್ಯಾ ಕಾರಿ ಡಾ| ಸುಭಾಸ ದಾಯಗೊಂಡ ಅವರು ಜನರ ಆರೋಗ್ಯ ಪರೀಕ್ಷೆ, ಕ್ವಾರೆಂಟೈನ್ ಗಳ ಬಗ್ಗೆ ಮಾಹಿತಿ ನೀಡಿದರು. ಡಾ| ಗಿರೀಶ ಮರೆಡ್ಡಿ, ಉಪತಹಶೀಲ್ದಾರ್ ಮಂಜುನಾಥ ದಾಸಪ್ಪನವರ, ಪುರಸಭೆ ಮುಖ್ಯಾ ಧಿಕಾರಿ ಆರ್.ಎಂ.ಪಾಟೀಲ, ಬಿಇಒ ವಿ.ವಿ. ಸಾಲಿಮಠ, ಲೋಕೋಪಯೋಗಿ ಇಲಾಖೆಯ ನಾಗೇಂದ್ರ ಪಟ್ಟಣಶೆಟ್ಟಿ, ಪಿಎಸ್‌ಐ ಶಿವಯೋಗಿ ಲೋಹಾರ, ಪಿ.ಎಸ್. ಬರಿಜಣ್ಣವರ ಇತರರಿದ್ದರು.