ಕಲಬುರಗಿ: ಜಿಲ್ಲೆಯ ವಿವಿಧ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ ಮತ್ತು ರಸಗೊಬ್ಬರ ವಿತರಿಸುವಲ್ಲಿ ಕೊರತೆ ಉಂಟಾಗಿದೆ. ಇದರಿಂದ ರೈತಾಪಿ ವರ್ಗಕ್ಕೆ ತೊಂದರೆ ಆಗುತ್ತಿದೆ. ಕೂಡಲೇ ಸಮರ್ಪಕ ಪೂರೈಕೆ ಮಾಡುವಂತೆ ಒತ್ತಾಯಿಸಿ ಬುಧವಾರ ಅಖೀಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಸದಸ್ಯರು ಕೃಷಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ಮಾಡಿದರು.
ಅಲ್ಲಲ್ಲಿ ಮಳೆಯಾಗಿದ್ದರಿಂದ ಮುಂಗಾರು ಹಂಗಾಮಿನ ಬಿತ್ತನೆ ಶುರುವಾಗಿದೆ. ರೈತರು ಬೀಜ, ಗೊಬ್ಬರಕ್ಕಾಗಿ ಪರ ದಾಡುವ ಸ್ಥಿತಿ ಬಂದೊದಗಿದೆ. ಮುಂಗಾರು ಆರಂಭ ವಾಗುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿತ್ತನೆಗೆ ಬೀಜ ಮತ್ತು ರಸಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ. ಈ ಕುರಿತು ರೈತರು ಆತಂಕ ಪಡಬೇಕಾಗಿಲ್ಲ. ಸಾಕಾಗುವಷ್ಟು ಬೀಜ ಮತ್ತು ರಸಗೊಬ್ಬರ ಲಭ್ಯವಿದೆ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಭರವಸೆಯಂತೆ ಪೂರೈಕೆ ಇಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಒಂದೆಡೆ ಸರ್ಕಾರ ಭರವಸೆ ನೀಡುತ್ತಿದೆ. ಇನ್ನೊಂದೆಡೆ ಸ್ಥಳಗಳಲ್ಲಿ ರಸಗೊಬ್ಬರ ಮತ್ತು ಬೀಜ ಸಿಗುತ್ತಿಲ್ಲ. ಹಾಗಾದರೆ ಸರ್ಕಾರದ ಭರವಸೆಗೆ ಕಿಮ್ಮತ್ತಿಲ್ಲವೇ? ಅಥವಾ ಅಧಿಕಾರಿಗಳು ಮಾತು ಕೇಳುತ್ತಿಲ್ಲವೇ? ಸರ್ಕಾರ ಪೂರೈಕೆ ಮಾಡುತ್ತಿರುವುದೆಲ್ಲವೂ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆಯಾ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಜಿಲ್ಲೆಗೆ 50 ಸಾವಿರ ಟನ್ ಗೊಬ್ಬರದ ಅಗತ್ಯವಿದೆ ಎಂದು ಒಂದು ಅಂದಾಜಿನ ಮೇರೆಗೆ ಹೇಳಲಾಗುತ್ತದೆ. ಆದರೆ ಕೃಷಿ ಇಲಾಖೆ ಬಳಿ ಕೇವಲ 6500 ಮೆಟ್ರಿಕ್ ಟನ್ ಮಾತ್ರ ಇರುವುದು ತಿಳಿದು ಬಂದಿದೆ. ಹೀಗಾಗಿ ಬೇಡಿಕೆ ಮತ್ತು ಪೂರೈಕೆ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ. ಅಲ್ಲದೇ ಡಿಎಪಿಯೊಂದಿಗೆ ಕಾಂಪ್ಲೆಕ್ಸ್ ಗೊಬ್ಬರ ಖರೀದಿಸಿದರೆ ಮಾತ್ರ ಡಿಎಪಿ ಕೊಡುವುದಾಗಿ ವ್ಯಾಪಾರಿಗಳು ಹೇಳುತ್ತಾರೆ. ಆದರೆ ಬಿತ್ತನೆಗೆ ಕಾಂಪ್ಲೆಕ್ಸ್‌ನ ಅಗತ್ಯವಿಲ್ಲ. ಅಲ್ಲದೇ ಡಿಎಪಿಯ ನಿಗದಿತ ಬೆಲೆ 1350ರೂ. ಇದೆ. ಆದರೆ, ವ್ಯಾಪಾರಿಗಳು 100ರೂ. ಹೆಚ್ಚುವರಿಯಾಗಿ ವಸೂಲಿ ಮಾಡುತ್ತಾ ರೈತರನ್ನು ಲೂಟಿಹೊಡೆಯುವುದನ್ನು ತಡೆಗಟ್ಟಲು ಬೇಕಾದ ಕ್ರಮವನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ದೂರಲಾಯಿತು.
ನಂತರ ಕೂಡಲೇ ಸಮರ್ಪಕ ಬೀಜ, ರಸಗೊಬ್ಬರ ಒದಗಿಸುವಂತೆ ಕೃಷಿ ಇಲಾಖೆ ಅಧಿಕಾರಿ ಮುಖಾಂತರ ಕೇಂದ್ರ ರಸಗೊಬ್ಬರ ಖಾತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು. ರೈತ ಮುಖಂಡರಾದ ವಿಶ್ವನಾಥ ಸಿಂಗೆ, ಮಹೇಶ ಎಸ್.ಬಿ, ಅಖೀಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಸದಸ್ಯರು ಹಾಗೂ ರೈತರು ಇದ್ದರು.