ಚಿತ್ರದುರ್ಗ: ಅಕಾಲಿಕ ಮಳೆಯಿಂದ ಬೆಳೆ ಹಾನಿಯಾಗಿದ್ದು, ವಿಮೆ ಮಾಡಿಸಿರುವ ರೈತರಿಗೆ ವಿಮಾ ಕಂಪನಿಗಳು ಸ್ಪಂದಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಜಿಲ್ಲಾ ಧಿಕಾರಿ ಕವಿತಾ ಎಸ್. ಮನ್ನಿಕೇರಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಕುರಿತು ರೈತರ ಅಹವಾಲು ಆಲಿಸಿ ಮಾತನಾಡಿದರು. ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ ಶೇ.75ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿದ್ದು, ಬೆಳೆ ಸಮೀಕ್ಷೆ ಮಾಡಿಸಬೇಕು. ಶೀಘ್ರದಲ್ಲಿ ರೈತರಿಗೆ ಬೆಳೆವಿಮೆ ಪರಿಹಾರ ಕೊಡಿಸಬೇಕು. ಜೊತೆಗೆ ತುರ್ತಾಗಿ ಶೇಂಗಾ, ರಾಗಿ, ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.
2016 ರಿಂದ ಈವರೆಗೆ ವಿಮಾ ಕಂಪನಿಗಳು ಸರಿಯಾಗಿ ಪರಿಹಾರ ನೀಡಿಲ್ಲ. ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸರಿಯಿಲ್ಲಎಂದು ವಿಮಾ ಕಂಪನಿಗಳು ಸಬೂಬು ಹೇಳಿರೈತರನ್ನು ಅಲೆದಾಡಿಸುತ್ತಿದ್ದಾರೆ. ಬೆಳೆ ವಿಮೆ ಕಟ್ಟಲು ದಿನಾಂಕ ನಿಗದಿ ಮಾಡುತ್ತಾರೆ. ಅದೇ ರೀತಿಯಾಗಿ ಬೆಳೆ ವಿಮೆ ಪರಿಹಾರ ನೀಡಲು ದಿನಾಂಕ ನಿಗದಿ ಮಾಡಬೇಕು ಎಂದು ರೈತರು ಸಭೆಯ ಗಮನಕ್ಕೆ ತಂದರು. ವಿಮಾ ಕಂಪನಿ ಅಧಿ ಕಾರಿಗಳು ರೈತರಿಗೆ ಸರಿಯಾಗಿ ಮಾಹಿತಿ ನೀಡಬೇಕು. ರೈತರೊಂದಿಗೆ ತಾಳ್ಮೆಯಿಂದ ವರ್ತಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಸೂಚಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮಾತನಾಡಿ, 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 76538 ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ನೋಂದಾಯಿಸಿದ್ದಾರೆ. ಚಳ್ಳಕೆರೆ ತಾಲ್ಲೂಕಿನಲ್ಲಿ 39 ಗ್ರಾಮ ಪಂಚಾಯಿತಿ, ಹಿರಿಯೂರು ತಾಲೂಕಿನ33 ಗ್ರಾಪಂ, ಚಿತ್ರದುರ್ಗ ತಾಲ್ಲೂಕಿನ 28 ಗ್ರಾಪಂ, ಮೊಳಕಾಲ್ಮುರು ತಾಲ್ಲೂಕಿನ 11 ಗ್ರಾಪಂ ಹಾಗೂ ಹೊಸದುರ್ಗ ತಾಲೂಕಿನ 4 ಹೋಬಳಿಗಳು ಸೇರಿದಂತೆ ಒಟ್ಟು 50577 ಫಲಾನುಭವಿಗಳಿಗೆ ರೂ.7123.08 ಲಕ್ಷಗಳ ವಿಮಾ ಪರಿಹಾರವನ್ನು ಪಾವತಿಸಲಾಗಿದೆ ಎಂದು ತಿಳಿಸಿದರು.
ಇಳುವರಿ ಆಧಾರದ ಮೇಲೆ 459 ಫಲಾನುಭವಿಗಳಿಗೆ ರೂ.61.12 ಲಕ್ಷ ವಿಮಾ ಪರಿಹಾರ ನೀಡಲಾಗಿದೆ. 2019-20ನೇ ಸಾಲಿನ ಹಿಂಗಾರು ಹಂಗಾಮಿಗೆ 16385 ರೈತರು ನೋಂದಣಿ ಮಾಡಿದ್ದು, ವಿಮಾ ಪರಿಹಾರ ಘೋಷಣೆ ಆಗಬೇಕಿದೆ. ಪ್ರಸಕ್ತ 2020-21ನೇ ಸಾಲಿನ ಮುಂಗಾರು ಹಂಗಾಮಿಗೆ 85912 ರೈತರು ಬೆಳೆವಿಮೆ ನೋಂದಣಿ ಮಾಡಿಸಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಪರಿಶೀಲಿಸಿ ಕ್ರಮ: ಬಿತ್ತನೆ ಸಮಯದಲ್ಲಿ ಕಳಪೆ ಈರುಳ್ಳಿ ಬಿತ್ತನೆ ಬೀಜ ವಿತರಿಸಿದ ಮಾರಾಟಗಾರರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಾ ಎಂದು ರೈತರು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸವಿತಾ, ಬೀಜಗಳನ್ನು ಪರೀಕ್ಷೆಗಾಗಿ ಕಳುಹಿಸಿದ್ದು, ಬೀಜ ಕಳಪೆ ವರದಿ ಬಂದ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಸಭೆಯಲ್ಲಿ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ| ಕೃಷ್ಣಪ್ಪ, ಜಿಲ್ಲಾ ಕೈಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಹನುಮಂತರಾಜು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ| ಓಂಕಾರಪ್ಪ ಹಾಗೂ ಲೀಡ್ ಬ್ಯಾಂಕ್ ಅಧಿಕಾರಿಗಳು, ವಿಮಾ ಕಂಪನಿ ಅಧಿ ಕಾರಿಗಳು, ರೈತ ಮುಂಖಡರು ಹಾಜರಿದ್ದರು.