Advertisement

ಗ್ರಾಪಂಗಳಲ್ಲಿ ಗ್ರಂಥಾಲಯಕ್ಕೆ ಸ್ಥಳ ಕಲ್ಪಿಸಿ

12:43 PM Oct 27, 2020 | Suhan S |

ಚಾಮರಾಜನಗರ: ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯಗಳಿಗೆ ಸ್ಥಳಾವಕಾಶ ಒದಗಿಸಲೇಬೇಕು. ಗ್ರಂಥಾಲಯಗಳಿಗೆ ಸ್ಥಳ ಕಟ್ಟಡ ಲಭ್ಯವಿಲ್ಲದಿದ್ದಲ್ಲಿ ಆಯಾ ಗ್ರಾಮಗಳಲ್ಲಿರುವ ಸಮುದಾಯ ಭವನಗಳಲ್ಲಿ ಗ್ರಂಥಾಲಯ ನಡೆಸಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌ ರವಿ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಆಯವ್ಯಯ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಒಂದು ಗ್ರಾಮ ಪಂಚಾಯಿತಿ ಗ್ರಂಥಾಲಯವನ್ನು ಆಯ್ಕೆ ಮಾಡಿ ಈ ಗ್ರಂಥಾಲಯಕ್ಕೆ ಅಗತ್ಯ ಪುಸ್ತಕಗಳು ಎಲ್ಲಾ ನಿಯತಕಾಲಿಕೆ, ಪೀಠೊಪಕರಣ, ಡಿಜಿಟಲ್‌ ಗ್ರಂಥಾಲಯ ಸೌಲಭ್ಯ ಕಲ್ಪಿಸುವ ಮೂಲಕ ಮಾದರಿಯನ್ನಾಗಿಸಬೇಕು. ಇದಕ್ಕಾಗಿ ಅಗತ್ಯ ಅನುದಾನ ನೀಡಲಾಗುವುದು ಎಂದರು.

ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತವಾಗಿ 1 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ಕಟ್ಟಡವನ್ನು ನಿರ್ಮಾಣ ಮಾಡುವ ಮೂಲಕ ಓದುಗರಿಗೆ ಅನುಕೂಲಕಲ್ಪಿಸಬೇಕು. ನಗರದಲ್ಲಿ ಅತ್ಯುತ್ತಮ ಗ್ರಂಥಾಲಯ ಸೌಲಭ್ಯಕ್ಕಾಗಿ ಸ್ವಂತ ಕಟ್ಟಡ ನಿರ್ಮಾಣ ಮಾಡಬೇಕು. ಇದಕ್ಕಾಗಿ ಈಗಾಗಲೇ ನಗರಸಭೆ ನೀಡಿರುವ ನಿವೇಶನದಲ್ಲಿ ಸುಸಜ್ಜಿತ ಕಟ್ಟಡವನ್ನು 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಅಂದಾಜು ಪಟ್ಟಿ ನಕಾಶೆ ಪಡೆಯಬೇಕು. ಕಟ್ಟಡಕ್ಕೆ ಬೇಕಿರುವ ಅನುದಾನದ ಪೈಕಿ ಜಿಲ್ಲಾ ಗ್ರಂಥಾಲಯದ ಪ್ರಾಧಿಕಾರದ ನಿಧಿಯಿಂದ 50 ಲಕ್ಷ ರೂ. ವೆಚ್ಚ ಮಾಡಬೇಕು. ಉಳಿದ 50 ಲಕ್ಷ ರೂಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಪಡೆಯಲು ಅಗತ್ಯ ಪ್ರಕ್ರಿಯೆ ಕೈಗೊಳ್ಳುವಂತೆ ತಿಳಿಸಿದರು.

ಪ್ರಸ್ತುತ ಇರುವ ಜಿಲ್ಲಾ ಗ್ರಂಥಾಲಯದಲ್ಲಿ ಓದುಗರಿಗೆ ಯಾವುದೇ ಕೊರತೆ ಬಾರದಂತೆ ಅಗತ್ಯ ವ್ಯವಸ್ಥೆ ಮಾಡಬೇಕು, ಡಿಜಿಟಲ್‌ ಗ್ರಂಥಾಲಯ ಬಳಕೆದಾರರು ಹೆಚ್ಚಾಗಲು ಉತ್ತೇಜನ ನೀಡಬೇಕು. ಎಲ್ಲಾ ಬಗೆಯ ಪುಸ್ತಕಗಳು ನಿಯತಕಾಲಿಕೆಗಳು, ಪತ್ರಿಕೆಗಳ ವಾಚನಕ್ಕೆ ಅವಕಾಶ ಲಭ್ಯವಾಗಬೇಕು ಎಂದರು. ತಾಲೂಕು ಕೇಂದ್ರಗಳಲ್ಲಿ ಇರುವ ಗ್ರಂಥಾಲಯಗಳು ಸ್ವಂತ ಕಟ್ಟಡದಲ್ಲಿ ನಿರ್ವಾಹಣೆಯಾಗಲು ಕಟ್ಟಡಕ್ಕಾಗಿ ನಿವೇಶನ ಪಡೆದುಕೊಳ್ಳಬೇಕು. ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಸೂಲಾಗುವ ಕರದಲ್ಲಿ ಶೇ.5ರಷ್ಟನ್ನು ಗ್ರಂಥಾಲಯ ನಿರ್ವಹಣೆ ಅಭಿವೃದ್ದಿಗೆ ಬಳಸಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ಈ ಅನುದಾನವು ಗ್ರಂಥಾಲಯಗಳಿಗೆ ಬೇಕಿರುವ ಸೌಲಭ್ಯ ಒದಗಿಸುವುದಕ್ಕಾಗಿ ಸದ್ವಿನಿಯೋಗವಾಗಬೇಕು ಎಂದರು.

ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾದ ಸಿದ್ದಪ್ಪಾಜಿ, ರವಿ, ಕುಮಾರ್‌, ಉಮಾ ಶಂಕರ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಟಿ.ಎಸ್‌.ಜವರೇಗೌಡ, ಮುಖ್ಯ ಗ್ರಂಥಾಲಯ ಅಧಿಕಾರಿ ಆರ್‌.ಶಿವಸ್ವಾಮಿ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next