Advertisement

ನೆರೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಿ: ಎಂಬಿಪಿ

11:07 PM Nov 06, 2019 | Lakshmi GovindaRaju |

ಬೆಂಗಳೂರು: ನೆರೆ ಸಂತ್ರಸ್ತರಿಗೆ ಬದುಕು ಕಟ್ಟಿಕೊಡದ ಸರ್ಕಾರ 100 ದಿನದ ಸಂಭ್ರಮಾಚರಣೆಯಲ್ಲಿ ತೊಡಗಿದೆ. ನೂರು ಸಾಧನೆಗಿಂತ ಸಂತ್ರಸ್ತ ರಿಗೆ ಶಾಶ್ವತ ಪರಿಹಾರ ಒದಗಿ ಸುವುದು ಮುಖ್ಯ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ನೂರು ಸಾಧನೆ ಬಗ್ಗೆ ಏನೂ ಹೇಳುವುದಿಲ್ಲ. ಸರ್ಕಾರವನ್ನು ನಿಂದಿಸುವುದರಿಂದ ಕೆಲಸವೂ ಆಗುವುದಿಲ್ಲ.

Advertisement

ಸರ್ಕಾರದ ನಿಂದನೆಗಿಂತ ಪ್ರವಾಹ ಪೀಡಿತರಿಗೆ ಶಾಶ್ವತ ಪರಿಹಾರ ದೊರೆಯುವುದು ಮುಖ್ಯ ಎಂದು ಸ್ಪಷ್ಟಪಡಿಸಿದರು. ನೆರೆ ಅನಾಹುತ ಸರಿಪಡಿಸುವಲ್ಲಿ ಮತ್ತು ಅಲ್ಲಿನ ಜನರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ಕಂದಾಯ ಸಚಿವರಾದವರಿಗೆ ಜವಾಬ್ದಾರಿ ಹೆಚ್ಚಾಗಿರುತ್ತದೆ. ಆದರೆ ಕಂದಾಯ ಸಚಿವ ಅಶೋಕ್‌ ಅವರಿನ್ನೂ ಪ್ರವಾಹ ಪೀಡಿತ ಭಾಗಗಳಿಗೆ ಭೇಟಿ ನೀಡಿಲ್ಲ. ಉಕ ಭಾಗದಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡ ಕುಟುಂಬಗಳು ಸ್ಥಳಾಂತರಗೊಳ್ಳಲು ಆಸಕ್ತಿ ತೋರಿವೆ.

ಆದರೆ ಸರ್ಕಾರ, ಸಂತ್ರಸ್ತರು ಬಯಸಿದರೆ ಸ್ಥಳಾಂತರಿಸುವುದಾಗಿ ಹೇಳಿಕೆ ನೀಡುತ್ತಿದೆ. ಅದರ ಬದಲು ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮ ಸಭೆ ನಡೆಸಿ ಸ್ಥಳಾಂತರ ಮಾಡುವ ಬಗ್ಗೆ ಸ್ಥಳೀಯರ ಒಪ್ಪಿಗೆ ಪಡೆದು ತೀರ್ಮಾನ ಮಾಡಬೇಕು. ಶೇ.90ರಷ್ಟು ಜನರು ಶಾಸ್ವತ ಪರಿಹಾರಕ್ಕಾಗಿ ಕಾಯುತ್ತಿದ್ದು, ನದಿ ಪಾತ್ರದಲ್ಲಿ ಪ್ರವಾಹಕ್ಕೆ ಸಿಲುಕುವ ಸ್ಥಳದಿಂದ ಎತ್ತರದ ಪ್ರದೇಶಗಳಿಗೆ ಪುನರ್ವಸತಿ ಕಲ್ಪಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

ರಾಜ್ಯ ಸರ್ಕಾರ ಆ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು. ಪ್ರವಾಹ ಬಂದು ಮೂರು ತಿಂಗಳು ಕಳೆದಿದ್ದರೂ, ಇದುವರೆಗೂ ಬೆಳೆ ಪರಿಹಾರ ನೀಡಿಲ್ಲ. ಸುಮಾರು 20 ಲಕ್ಷ ಎಕರೆ ಬೆಳೆ ಹಾನಿಯಾಗಿದ್ದು, ರೈತರು ಪರಿಹಾರ ಸಿಗದೇ ಬೇರೆ ಬೆಳೆ ಬೆಳೆಯಲು ಸಾಧ್ಯವಾಗದಂತಾಗಿದೆ. ಸರ್ಕಾರ ಆದಷ್ಟು ಬೇಗ ಬೆಳೆ ನಷ್ಟ ಸಮೀಕ್ಷೆ ಮಾಡಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

“ಸಿಎಂ ಆಗುವ ಅರ್ಹತೆ ನನಗೂ ಇದೆ’
ಬೆಂಗಳೂರು: ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳು ನನಗಿವೆ. ಗುರಿಯನ್ನೂ ಇಟ್ಟುಕೊಂಡಿದ್ದೇನೆ. ತಮ್ಮ ವಿರುದ್ಧ ಅನಗತ್ಯ ಸುಳ್ಳು ವದಂತಿ ಹಬ್ಬಿಸದಂತೆ ಮಾಜಿ ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ. ತಾವು ಗೃಹ ಸಚಿವರಾಗಿದ್ದಾಗ ಅಕ್ರಮ ವ್ಯವಹಾರಕ್ಕೆ ಶಿಫಾರಸು ಮಾಡಿದ್ದೇನೆ ಎಂದು ಆಪಾದಿಸಿ, ವಿನೋದ್‌ ನಾಯ್ಕ ಎಂಬುವರು ತಮ್ಮ ವಿರುದ್ಧ ಪ್ರಧಾನಿಗೆ ಪತ್ರ ಬರೆದಿದ್ದರು. ಈ ಸಂಬಂಧ ಸಿಬಿಐ, ರಾಜ್ಯ ಡಿಜಿಪಿಗೆ ಪತ್ರ ಬರೆದು ಪರಿಶೀಲನೆ ನಡೆಸುವಂತೆ ಸೂಚಿಸಿತ್ತು.

Advertisement

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಪಾಟೀಲ್‌, ತಮ್ಮ ಕುಟುಂಬ ಗೌರವ ಸ್ಥಾನದಲ್ಲಿದ್ದು, ಬಿಎಲ್‌ಡಿಯಂತಹ ಸಂಸ್ಥೆ ಕಟ್ಟಿ ಬೆಳೆಸಿದ್ದೇವೆ. ನಾನು ರಾಜಕೀಯದಲ್ಲಿದ್ದೇನೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೇರುವ ಗುರಿ ಹೊಂದಿದ್ದೇನೆ ಎಂದು ಹೇಳಿದರು. ಔರಾದ್ಕರ್‌ ವರದಿ ಜಾರಿ ಷರತ್ತು ತೆಗೆದುಹಾಕಿ: ಪೊಲಿಸರ ವೇತನ ಹೆಚ್ಚಳ ಕುರಿತು ಎಡಿಜಿಪಿ ರಾಘವೇಂದ್ರ ಔರಾದ್ಕರ್‌ ನೀಡಿರುವ ವರದಿ ಜಾರಿಯಲ್ಲಿ ಹಣಕಾಸು ಇಲಾಖೆ ಹಾಕಿರುವ ಷರತ್ತನ್ನು ತೆಗೆದು ಹಾಕಿ, ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೂ ವೇತನ ಪರಿಷ್ಕರಣೆ ಮಾಡಬೇಕು ಎಂದು ಪಾಟೀಲ್‌ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next