Advertisement

ಸ್ಥಳೀಯರಿಗೆ ಮೀನುಗಾರಿಕೆ ಉದ್ಯೋಗ ನೀಡಲು ಆಗ್ರಹ

08:44 AM Jul 18, 2020 | Suhan S |

ಕನಕಪುರ: ಹೊರ ರಾಜ್ಯದ ಪಾಲಾಗುತ್ತಿರುವ ಮೀನುಗಾರಿಕೆ ವೃತ್ತಿ ಅವಕಾಶ ನಮಗೆ ನೀಡಬೇಕು ಎಂದು ಮುಳ್ಳಹಳ್ಳಿ ಗ್ರಾಮಸ್ಥರು ಅಧಿಕಾರಿ ಮತ್ತು ಜನಪ್ರತಿನಿಧಿಗಳಿಗೆ ಆಗ್ರಹಿಸಿದರು.

Advertisement

ತಾಲೂಕಿನ ಕೋಡಿಹಳ್ಳಿ ಹೋಬಳಿಯ ಮುಳ್ಳಹಳ್ಳಿ ಗ್ರಾಪಂ ವ್ಯಾಪ್ತಿಯ ಕೆರೆ ಮೀನು ಪಾಶುವಾರು ಹಕ್ಕಿನ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು ಮಾತನಾಡಿದರು. ನಮ್ಮ ಗ್ರಾಮದ ಕೆರೆ ಗುತ್ತಿಗೆ ಪಡೆಯುವ ಗುತ್ತಿಗೆದಾರರು, ಮೀನು ಹಿಡಿಯಲು ಹೊರ ರಾಜ್ಯದ ಕಾರ್ಮಿಕರಿಗೆ ವಹಿಸುತ್ತಾರೆ. ಅದರಿಂದ ನಮ್ಮ ಸಮುದಾಯಕ್ಕೆ ಉದ್ಯೋಗವಿಲ್ಲದಂತಾಗಿದೆ. ಜತೆಗೆ ಬೆಂಗಳೂರು ಸೇರಿದ್ದ ಯುವಕರು ಗ್ರಾಮಗಳಿಗೆ ಮರಳಿದ್ದು, ಉದ್ಯೋಗವಿಲ್ಲದೆ ಪರಿತಪಿಸುತ್ತಿದ್ದಾರೆ. ಮೀನುಗಾರಿಕೆ ನಮ್ಮ ಕುಲಕಸುಬಾಗಿದ್ದು, ಬೇರೆ ವೃತ್ತಿಗೆ ನಮಗೆ ಗೊತ್ತಿಲ್ಲ. ಹೀಗಾಗಿ ಗ್ರಾಮಸ್ಥರಿಗೆ ಉದ್ಯೋಗ ನೀಡಿ, ಗ್ರಾಮದ ಜನರಿಗೆ ಪ್ರತಿ ಕೆ.ಜಿ. ಮೀನಿಗೆ 60 ರಿಂದ 100 ರೂ.ಗಳಿಗೆ ಮಾರಾಟ ಮಾಡಬೇಕು ಎಂದು ಆಗ್ರಹಿಸಿದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಜಿಪಂ ಸದಸ್ಯ ಜಯರತ್ನ ರಾಜೇಂದ್ರ ಮತ್ತು ತಾಪಂ ಸದಸ್ಯೆ ಮಂಗಳಮ್ಮ ಕೆರೆ ಗುತ್ತಿಗೆ ಪಡೆಯುವ ಗುತ್ತಿಗೆ ದಾರರಿಗೆ ಸೂಚನೆ ನೀಡಿ ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದರು. 5 ವರ್ಷದ ಅವಧಿಗೆ ನಡೆದ ಕೆರೆ ಹರಾಜು ಪ್ರಕ್ರಿಯೆಯಲ್ಲಿ ಮುಳ್ಳಹಳ್ಳಿ ಊರ ಮುಂದಿನ ಕೆರೆ 8.35 ಲಕ್ಷ ರೂ. ಬಾರಿ ಮೊತ್ತಕ್ಕೆ ಹರಾಜಾಯಿತು. ಉಳಿದಂತೆ ಮುದ್ದಪ್ಪನ ಕೆರೆ 31 ಸಾವಿರ, ಮುತ್ತಪ್ಪನ ಕಟ್ಟೆ 16,500, ಗೆಂಡೆಕೆರೆ 41 ಸಾವಿರ, ಲಕ್ಕೇಗೌಡನ ಕೆರೆ 7500, ಸಿಂಗ್ರಿಗೌಡನ ಕೆರೆ 98 ಸಾವಿರ, ಚಿಕ್ಕೋಬಾವಿ ಕೆರೆ 10 ಸಾವಿರಕ್ಕೆ ಹರಾಜಾದವು.

ಗ್ರಾಪಂ ಅಧ್ಯಕ್ಷ ಬೈರಯ್ಯ,ಅಭಿವೃದ್ಧಿ ಅಧಿಕಾರಿ ಕುಮಾರ್‌ ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next