Advertisement

ಅಲೆಮಾರಿ ಸಮುದಾಯಕ್ಕೆ ಸೌಲಭ್ಯ ಒದಗಿಸಿ

02:47 PM Apr 03, 2022 | Team Udayavani |

ಚಿತ್ರದುರ್ಗ: ಅಲೆಮಾರಿ, ಅರೆ ಅಲೆಮಾರಿ ಸಮುದಾಯಕ್ಕೆ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಸೌಲಭ್ಯ ಹಾಗೂ ಮೀಸಲಾತಿ ಕಲ್ಪಿಸುವಲ್ಲಿ, ಜಿಲ್ಲಾಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ, ಜಾರಿಗೊಳಿಸಿದೆ. ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಅಲೆಮಾರಿ ಜನಾಂಗದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜೆ.ಸಿ. ವೆಂಕಟೇಶಯ್ಯ ಮಾತನಾಡಿ, ಅಲೆಮಾರಿ ಜನಾಂಗದ ಮಕ್ಕಳಿಗೆ ಮಾಧ್ಯಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ಮಂಜೂರು ಮಾಡಲಾಗುತ್ತಿದೆ. 2021-22ನೇ ಸಾಲಿಗೆ 5 ರಿಂದ 7ನೇ ತರಗತಿ ಮತ್ತು 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾಸಿಕ 200 ರಂತೆ 10 ತಿಂಗಳ ಅವಧಿಗೆ ಒಟ್ಟು 2 ಸಾವಿರ ರೂ. ಗಳಂತೆ ಒಟ್ಟು 14,524 ವಿದ್ಯಾರ್ಥಿಗಳಿಗೆ 28.56 ಲಕ್ಷ ರೂ. ವಿದ್ಯಾರ್ಥಿ ವೇತನ ಮಂಜೂರು ಮಾಡಲಾಗಿದೆ. ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಗೂ ವಿಶೇಷ ಪ್ರೋತ್ಸಾಹಧನ ಮಂಜೂರು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹಿರಿಯೂರು ತಾಲೂಕಿನ ಗುಡ್ಡದ ಗೊಲ್ಲರಹಟ್ಟಿಯಲ್ಲಿ ಆಶ್ರಯ ಶಾಲೆ ಕಾರ್ಯನಿರ್ವಹಿಸುತ್ತಿದ್ದು, 1ರಿಂದ 5 ರವರೆಗಿನ 25 ವಿದ್ಯಾರ್ಥಿಗಳಿಗೆ ಸೌಲಭ್ಯವಿದೆ. ಚಿತ್ರದುರ್ಗ ನಗರದಲ್ಲಿ 100 ಸಂಖ್ಯಾಬಲದ 1 ಬಾಲಕರ ಹಾಗೂ 2 ಬಾಲಕಿಯರ ಅಲೆಮಾರಿ ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಂದ ಒಟ್ಟು 300 ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ. ಇನ್ನೂಳಿದ ವಿದ್ಯಾರ್ಥಿನಿಲಯಗಳಿಂದ ಶೇ.10ರಷ್ಟು ಅಲೆಮಾರಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಮೆಟ್ರಿಕ್‌ ನಂತರದ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ನಿಲಯಗಳಲ್ಲಿ ಉಚಿತವಾಗಿ ಊಟ ಮತ್ತು ವಸತಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.

Advertisement

ಗೊಲ್ಲ ಸಮುದಾಯದವರು ಹೆಚ್ಚು ವಾಸಿಸುವ ಹಟ್ಟಿಗಳಲ್ಲಿ ಕಂದಾಚಾರದಂತಹ ಪದ್ಧತಿಗಳನ್ನು ಕೊನೆಗಾಣಿಸಲು ಹಾಗೂ ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯದವರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು 2021-22ನೇ ಸಾಲಿಗೆ ಸರ್ಕಾರದಿಂದ 44 ಕಾರ್ಯಕ್ರಮಗಳಿಗೆ ತಲಾ 15 ಸಾವಿರದಂತೆ 6.60 ಲಕ್ಷ ರೂ. ಬಿಡುಗಡೆಯಾಗಿದ್ದು, ಕಾರ್ಯಕ್ರಮ ನಡೆಸಲಾಗಿದೆ ಎಂದರು. ಅಲೆಮಾರಿ, ಅರೆಅಲೆಮಾರಿ ಜನಾಂಗದವರಿಗೆ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮದ ಮೂಲಕ ವಸತಿರಹಿತರಿಗೆ ವಸತಿ ಯೋಜನೆಯಡಿ ಚಿತ್ರದುರ್ಗ-972, ಚಳ್ಳಕೆರೆ-1905, ಹಿರಿಯೂರು-4468, ಹೊಳಲ್ಕೆರೆ-1524, ಹೊಸದುರ್ಗ-1717 ಹಾಗೂ ಮೊಳಕಾಲ್ಮೂರು ತಾಲೂಕು 4448 ಸೇರಿದಂತೆ ಒಟ್ಟು 15034 ಫಲಾನುಭವಿಗಳಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಪ್ರತಿಕ್ರಿಯಿಸಿ, ಅಲೆಮಾರಿ ಜನಾಂಗದವರು ವಾಸಿಸುವ ಕಾಲೋನಿಗಳಲ್ಲಿ ಕಾಂಕ್ರಿಟ್‌ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಿ ಸೌಲಭ್ಯ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ಕಾಮಗಾರಿಗಳ ನಡೆಯುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಜಿಪಂ ಸಿಇಒ ಡಾ| ಕೆ.ನಂದಿನಿದೇವಿ, ಡಿಎಚ್‌ಒ ಡಾ| ಆರ್‌.ರಂಗನಾಥ್‌, ವಾರ್ತಾಧಿಕಾರಿ ಬಿ.ಧನಂಜಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next