ಕುದೂರು: ಸಿದ್ಧಗಂಗಾ ಶ್ರೀ ಹುಟ್ಟೂರಾದ ವೀರಾಪುರ ಗ್ರಾಮ ದತ್ತು ಪಡೆಯುವುದಾಗಿ ಹೇಳಿ ಸುಮಾರು 8 ವರ್ಷಗಳೇ ಕಳೆದಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ನೀಡಿದ ಭರವಸೆ ಇನ್ನೂ ಈಡೇರಿಲ್ಲ.
ವೀರಾಪುರ ಅಭಿವೃದ್ಧಿ ಮತ್ತು ವಿಶ್ವದರ್ಜೆಯ ಸಾಂಸ್ಕೃತಿಕ ಮತ್ತು ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ., ವಿಶೇಷ ಅನುದಾನವನ್ನು ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಆದರೆ, ಈ ಭರವಸೆ ಈಡೇರುವ ನಿರೀಕ್ಷೆ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಶಿವಕುಮಾರ ಸ್ವಾಮೀಜಿ ಹುಟ್ಟೂರಲ್ಲಿ ಸಾಂಸ್ಕೃತಿಕ ಮತ್ತು ಪಾರಂಪರಿಕ ಕೇಂದ್ರ ಸ್ಥಾಪನೆಗೂ ಮೊದಲು ಕನಿಷ್ಠ ಮೂಲ ಸೌಲಭ್ಯ ಕಲ್ಪಿಸಬೇಕಾಗಿದೆ.
ಪ್ರಗತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ: ವೀರಾಪುರ ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿಗೊಳಿಸುವ ಭರವಸೆಯನ್ನು ಈಗಿನ ಸಿಎಂ, ಹಿಂದಿನ ಸರ್ಕಾರಗಳು ನೀಡಿವೆ. ಆದರೆ, ಪ್ರಗತಿಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಸರ್ಕಾರವು ಶ್ರೀಗಳ ತಂದೆ- ತಾಯಿ ಅವರ ಸಮಾಧಿ ಜಾಗ ಹಾಗೂ ಶ್ರೀಗಳು ಬೆಳೆದ ಮನೆಯನ್ನು ಸ್ಮಾರಕವಾಗಿಸುತ್ತೇವೆ. ಐಟಿಐ ಕಾಲೇಜು ಆರಂಭಿಸುತ್ತೇವೆ ಎಂದು ಘೋಷಿಸಿದರು. ಅದರಂತೆ ನಾವು ಶೈಕ್ಷಣಿಕ ಚಟುವಟಿಕೆಗಳಿಗೆ 12 ಎಕರೆ ಹಾಗೂ ಸ್ಮಾರಕ ನಿರ್ಮಾಣಕ್ಕೆ 1.4 ಎಕರೆ ಭೂಮಿ ನೀಡಿದ್ದೇವೆ. ನಾವು ಕೊಟ್ಟ ಭೂಮಿ ಸುಮಾರು ವರ್ಷಗಳಿಂದ ಹಾಗೆ ಪಾಳು ಬಿದಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಚಾರಕ್ಕೆ ಗ್ರಾಮಸ್ಥರ ಪರದಾಟ: ಗ್ರಾಮದಲ್ಲಿ ಗುಣಮಟ್ಟದ ರಸ್ತೆ, ಸಾರಿಗೆ ಸಂಪರ್ಕವಿಲ್ಲದೇ ಗ್ರಾಮಸ್ಥರು ಸಂಚಾರಕ್ಕೆ ಪರದಾಡುತ್ತಿದ್ದಾರೆ. ಅಲ್ಲದೆ, ಆಸ್ಪತ್ರೆ, ಶಾಲೆ, ಕಾಲೇಜು ಹೀಗೆ ಎಲ್ಲಾ ಕೆಲಸ – ಕಾರ್ಯಗಳಿಗೆ ಪಕ್ಕದ ಗ್ರಾಮಕ್ಕೆ ನಡಿಗೆ ಮೂಲಕವೇ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಯೋಜನೆ ಅನುಷ್ಠಾನಗೊಳಿಸಿ: ಸಿದ್ಧಗಂಗಾ ಶ್ರೀಗಳ ಹೆಸರಿನಲ್ಲಿ ಯೋಗ ಮಂದಿರ, ಅಧ್ಯಯನ ಕೇಂದ್ರ, ಕಾಲೇಜು ಮತ್ತು ಉನ್ನತ ಶಿಕ್ಷಣ ಪ್ರಾರಂಭಿಸಲು ಗ್ರಾಮಸ್ಥರು ಸಿದ್ಧಗಂಗಾ ಮಠಕ್ಕೆ 6 ಎಕರೆ ಜಮೀನನ್ನು ನೀಡಿದ್ದಾರೆ. ರಸ್ತೆಯ ಅಗಲೀಕರಣ, ಬಸ್ ವ್ಯವಸ್ಥೆ, 5 ಎಕರೆ ಭೂ ಪ್ರದೇಶದಲ್ಲಿ ಹೈಸ್ಕೂಲ್ ಹಾಗೂ ಐಟಿಐ ಕಾಲೇಜು ನಿರ್ಮಾಣ, 1500 ಎಕರೆ ಸರ್ಕಾರಿ ಗೋಮಾಳದಲ್ಲಿ ಸಂಸ್ಕೃತ ವಿವಿ ಸ್ಥಾಪನೆ,
ಶ್ರೀಗಳ ಪ್ರತಿಮೆ ಹೀಗೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾಗಿದೆ. ಈ ಬಾರಿ ಬಜೆಟ್‌ನಲ್ಲಿ ವೀರಾಪುರ ಗ್ರಾಮ ಅಭಿವೃದ್ಧಿ ಹಾಗೂ ವಿಶ್ವ ದರ್ಜೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ.,ಗಳ ವಿಶೇಷ ಅನುದಾನ ನೀಡಿರುವುದು ಸಂತೋಷವಾಗಿದೆ. ಆದರೆ, ಇದು ಈಡೇರುವುದೇ ಎಂಬ ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದೆ.
* ಕೆ.ಎಸ್.ಮಂಜುನಾಥ್, ಕುದೂರು