ಭಾಲ್ಕಿ: ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಸೇರಿ ಎಲ್ಲ ರಂಗಗಳಲ್ಲಿ ಸಮಾನ ಅವಕಾಶ ಕಲ್ಪಿಸುವ ಕೆಲಸ ಆಗಬೇಕಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಟೌನ್‌ಹಾಲ್ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಮಕ್ಕಳನ್ನು ಶಾಪ ಎಂದು ಯಾರು ಭಾವಿಸಬಾರದು. ಗಂಡು-ಹೆಣ್ಣು ಭೇದ ಮಾಡಬಾರದು. ಅವರನ್ನು ಸಮಾಜದಲ್ಲಿ ಗೌರವದಿಂದ ಕಾಣಬೇಕು. ಆದರೆ, ಬಾಲ್ಯ ವಿವಾಹ, ದೌರ್ಜನ್ಯದಂತಹ ಪ್ರಕರಣಗಳು ಇಂದಿಗೂ ನಡೆಯುತ್ತಿರುವುದು ಕಳವಳ ತರಿಸಿದೆ ಎಂದರು.
ಗಂಡು, ಹೆಣ್ಣಿನ ಅನುಪಾತ ಅವಲೋಕಿಸಿದರೂ ನಾವು ಎಚ್ಚೆತ್ತುಕೊಳ್ಳಬೇಕಿದೆ. ಹೆಣ್ಣಿಗೆ ಹೆಣ್ಣು ಶತ್ರು ಆಗಬಾರದು. ತನಗೆ ಗಂಡು ಮಗುವೇ ಬೇಕು ಎನ್ನುವ ಆಸೆ ಬಿಡಬೇಕು. ಮನೆಯಲ್ಲಿ ಹೆಣ್ಣು ಹಾಗೂ ಗಂಡು ಮಕ್ಕಳನ್ನು ಸಮಾನವಾಗಿ ನೋಡುವ ಮನೋಭಾವ ಎಲ್ಲರಲ್ಲೂ ಮೂಡಬೇಕು. ಇದಕ್ಕಾಗಿ ಹೆಣ್ಣು ಮಗುವಿಗೆ ಉನ್ನತ ಶಿಕ್ಷಣ ನೀಡುವ ಅವಶ್ಯಕತೆ ಇದೆ. ಹಾಗಾಗಿ ಮಹಿಳೆಯರು ತಮಗೆ ಎಷ್ಟೇ ಕಷ್ಟ ಬಂದರೂ ಕೂಡ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರಾಗಿ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ಎಪಿಎಂಸಿ ಅಧ್ಯಕ್ಷ ವೀರಶೆಟ್ಟಿ ಖಂಡ್ರೆ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ, ಪುರಸಭೆ ಸದಸ್ಯರಾದ ಅನಿಲ ಸುಂಟೆ, ರಾಹುಲ ಪೂಜಾರಿ, ಜಿಪಂ ಮಾಜಿ ಅಧ್ಯಕ್ಷ ಶಿವರಾಜ ಹಾಸನಕರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್, ಶಶಿಧರ ಕೋಸಂಬೆ, ಚಂದ್ರಶೇಖರ ಬನ್ನಾಳೆ, ದತ್ತಾತ್ರಿ ಹಂಪಾ, ಶಿವರಾಜ ಹಂಪಾ, ಸಂತೋಷ ಮಾನಕಾರ್, ಮಹೇಶ ಬನ್ನಾಳೆ, ಸಂಜು ಮೇತ್ರೆ, ರಾಜಕುಮಾರ ಚಲುವಾ ಇದ್ದರು.