ಯಾದಗಿರಿ: ಜಿಲ್ಲೆಯ ಸಮಾಜ ಕಲ್ಯಾಣ, ಪಪಂ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ಕಾರ್ಯನರ್ವಹಿಸುತ್ತಿರುವ ಗುತ್ತಿಗೆ ನೌಕರರ ಇಪಿಎಫ್ ಮತ್ತು ಇಎಸ್‌ಐ ಸೌಕರ್ಯಗಳನ್ನು ನೀಡುವಂತೆ ಆಗ್ರಹಿಸಿ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದಿಂದ ಅನಿರ್ದಿಷ್ಟ ಅಹೋರಾತ್ರಿ ಹೋರಾಟ ಆರಂಭವಾಗಿದೆ.
ಜಿಲ್ಲಾಡಳಿತ ಭವನ ಎದುರು ಹೋರಾಟ ಆರಂಭಿಸಲಾಗಿದ್ದು, ಕಾರ್ಮಿಕರು 2010ರಿಂದ 2020ರವರೆಗಿನ ಎಪಿಎಫ್ ಮತ್ತು ಇಎಸ್‌ಐ ದಾಖಲೆ ನೀಡುವುದು ಹಾಗೂ ಬಾಕಿ ವೇತನ ಬಿಡುಗಡೆಗೊಳಿಸಿ ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರಿಸುವಂತೆ ಒತ್ತಾಯಿಸಿದರು.
ಕಾರ್ಮಿಕರ ಇಪಿಎಫ್ ಮತ್ತು ಇಎಸ್‌ಐ ಪಾವತಿ ಕುರಿತು ಗುತ್ತಿಗೆ ಸಂಸ್ಥೆಗಳು ನಿರ್ಲಕ್ಷವಹಿಸಿದ್ದು, ಹಾಗಾಗಿ ಕಾರ್ಮಿಕರಿಗೆ ಸುರಕ್ಷತೆಯಿಲ್ಲದಂತಾಗಿದೆ. ಈ ಬಗ್ಗೆ 2019ರ ನ.19ರಂದು ಜಿಪಂನಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 15 ದಿನಗಳಲ್ಲಿ ಮಾಹಿತಿ ನೀಡಲು ಹೇಳಲಾಗಿತ್ತು. ಆದರೆ ಈವರೆಗೆ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯ ಹೊರಗುತ್ತಿಗೆ ಕಾರ್ಮಿಕರಿಗೆ 5 ತಿಂಗಳಿನಿಂದ ವೇತನವಿಲ್ಲ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಇಲಾಖೆಯ ಗುತ್ತಿಗೆ ಕಾರ್ಮಿಕರಿಗೆ 2020ರ ಮಾರ್ಚ್, ಏಪ್ರಿಲ್, ಮೇ ತಿಂಗಳ ಹಾಗೂ ನವೆಂಬರ್, ಡಿಸೆಂಬರ್ ತಿಂಗಳ ಪಾವತಿಯಾಗದ ವೇತನ ತಕ್ಷಣವೇ ನೀಡಲು ಒತ್ತಾಯಿಸಲಾಯಿತು.
ಬೇಕಿ ವೇತನ ಸೇರಿದಂತೆ ಕೆಲ ಬೇಡಿಕೆಗಳನ್ನು ಈಡೇರಿಸುವವರೆಗೆ ಧರಣಿ ನಿರಂತರವಾಗಿ ನಡೆಯುತ್ತದೆ ಎಂದು ಸಂಘದ ರಾಜ್ಯಾಧ್ಯಕ್ಷ ಕೆ.ಸೋಮಶೇಖರ ಹೇಳಿದರು. ಜಿಲ್ಲಾಧ್ಯಕ್ಷೆ ಡಿ.ಉಮಾದೇವಿ, ರಾಮಲಿಂಗಪ್ಪ ಬಿ.ಎನ್., ತಾಜುದ್ದೀನ್, ಗಜಾನನ, ಮಲ್ಲಪ್ಪ, ರೇಣುಕಾ, ಮರೆಮ್ಮ, ಯಲ್ಲಮ್ಮ ಸೇರಿದಂತೆ ಕಾರ್ಮಿಕರು ಧರಣಿಯಲ್ಲಿ ಭಾಗವಹಿಸಿದ್ದರು.