ಚಾಮರಾಜನಗರ: ಅನ್ಯ ರಾಜ್ಯಗಳಲ್ಲಿ ಉಂಟಾಗಿರುವ ಮರುಭೂಮಿ ಮಿಡತೆ ಹಾವಳಿ ಜಿಲ್ಲೆಯಲ್ಲೂ ಕಾಣಿಸಿಕೊಂಡರೆ ಯಾವ ಬಗೆಯಲ್ಲಿ ಹತೋಟಿಗೆ ತರಬೇಕೆಂಬ ಬಗ್ಗೆ ರೈತರು ಹಾಗೂ ಅಧಿಕಾರಿಗಳಿಗೆ ಪೂರ್ವ ಮುನ್ನೆಚ್ಚರಿಕೆ ಹಾಗೂ ತರಬೇತಿಯನ್ನು ನೀಡುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮರುಭೂಮಿ ಮಿಡತೆ ನಿವಾರಣೆ ಕುರಿತ ಮುಂಜಾಗ್ರತಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮರುಭೂಮಿ ಮಿಡತೆ ಗಳ ಹಾವಳಿ ಇದುವರೆಗೆ ಕಂಡುಬಂದಿಲ್ಲ. ಒಂದು ವೇಳೆ ಕಂಡುಬರಬಹುದಾದರೆ ಯಾವ ಬಗೆಯಲ್ಲಿ ತಡೆಯಬೇಕು ಎಂಬ ಬಗ್ಗೆ ಜಾಗೃತಗೊಳಿಸಬೇಕಿದೆ ಎಂದು ಹೇಳಿದರು.
ರೈತರಿಗೆ ಜಾಗೃತಿ: ಇದುವರೆಗೆ ಎಲ್ಲಿಯೂ ಹಾವಳಿ ಪ್ರಕರಣ ವರದಿಯಾಗಿಲ್ಲ. ಆದರೂ ರೈತರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಸಭೆಗಳಲ್ಲಿ ತಹಶೀಲ್ದಾರ್, ಪೊಲೀಸ್, ರೈತ ಸಂಘದ ಪ್ರತಿನಿಧಿಗಳು, ಗ್ರಾಮಲೆಕ್ಕಿಗರು, ಗ್ರಾಮ ಪಂಚಾಯತಿಗಳನ್ನು ಒಳಗೊಂಡ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಬೇಕು ಎಂದು ಸೂಚಿಸಿದರು.
ಮುಂಜಾಗ್ರತೆ ಅಗತ್ಯ: ಕೃಷಿ ವಿಜ್ಞಾನ ಕೇಂದ್ರ ಕೀಟತಜ್ಞ ಡಾ. ಶಿವರಾಯ ನಾವಿ ಮಾತ ನಾಡಿ, ಪ್ರಸ್ತುತ ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ರಾಜ್ಯದ ಉತ್ತರ ಗಡಿಜಿಲ್ಲೆಗಳಲ್ಲಿ ಮರುಭೂಮಿ ಮಿಡತೆ ಕಂಡುಬಂದಿದ್ದು, ಜಿಲ್ಲೆಗೆ ಬರುವ ಸಾಧ್ಯತೆ ಶೇ.99 ಇಲ್ಲ. ಮರುಭೂಮಿ ಮಿಡತೆ ಕಂಡುಬಂದಲ್ಲಿ ಕ್ರಮಕೈಗೊಳ್ಳಬಹುದು ಎಂದು ತಿಳಿಸಿದರು.
ಉಳುಮೆ ಮಾಡಿ: ಮಿಡತೆಗಳು ಮೊಟ್ಟೆ ಇಡುವ ಜಾಗವನ್ನು ಗುರುತಿಸಿ ಉಳುಮೆ ಮಾಡಬೇಕು. ಸುತ್ತ ಕಂದಕ ಬದು ನಿರ್ಮಿಸಿ ಮೊಟ್ಟೆಯಿಂದ ಬರುವ ಮರಿಗಳನ್ನು ಕಂದ ಕದ ಬದುಗಳಲ್ಲಿ ಬಿಟ್ಟು ಮೊಟ್ಟೆಗಳನ್ನು ನಾಶಪಡಿಸಲು ಪದೇ ಪದೆ ಉಳುಮೆ ಮಾಡ ಬೇಕು. ಮಿಡತೆ ಕಾಣಿಸಿಕೊಂಡಾಗ ತಗಡಿನ ಡಬ್ಬಿ, ಡ್ರಮ್ಮು, ತಟ್ಟೆ ಮತ್ತು ಎಲೆಕ್ಟ್ರಾನಿಕ್ ಮೂಲಕ ಭಾರಿ ಶಬ್ದ ಉಂಟು ಮಾಡಿದಲ್ಲಿ ಮಿಡತೆಗಳನ್ನು ಹತೋಟಿಗೆ ತರಬಹುದು ಎಂದರು.
ಬೇವಿನ ದ್ರವ ಸಿಂಪಡಣೆ: ಬೇವು ಆಧಾರಿತ ದ್ರವ ಸಿಂಪಡಣೆ ಮಾಡಿ ನೀರಿನಲ್ಲಿ ಬೆರಸಿ ಗಿಡಗಳಿಗೆ ಸಿಂಪಡಿಸಬೇಕು. ಬೆಳೆದು ನಿಂತ ಬೆಳೆಗಳಿಗೆ ಕ್ಲೋರಿಪೈರಿಪಾಸ್, ಮೆಲಾಥಿನ್ ಯನ್ನು ಧೂಳೀಕರಿಸಬೇಕು. ಬಲಿಯುತ್ತಿರುವ ಮಿಡತೆಗಳು ಹೊಲದಲ್ಲಿ ಓಡಾಡುವಾಗ ಬೆಂಕಿ ಹಚ್ಚಿ ಸುಡುವ ಮೂಲಕ ಮರುಭೂಮಿ ಮಿಡತೆಗಳ ನಿಯಂತ್ರಣ ಮಾಡಬಹುದು ಎಂದು ಹೇಳಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚಂದ್ರಕಲಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಶಿವಪ್ರಸಾದ್, ರೇಷ್ಮೆ ಇಲಾಖೆಯ ಉಪನಿರ್ದೇಶಕ ಲಕ್ಷ್ಮೀನರ ಸಿಂಹಯ್ಯ, ಕೆವಿಕೆ ಕೃಷಿ ವಿಜ್ಞಾನ ಕೇಂದ್ರ ಕೀಟತಜ್ಞ . ಯೋಗೇಶ್ ಹಾಜರಿದ್ದರು.
ವಿಪತ್ತುಗಳು ಬರುವ ಮೊದಲೇ ಅಧಿಕಾರಿಗಳು ವಿಜ್ಞಾನಿಗಳ ಸಹಾಯ ಪಡೆದು ಪೂರ್ವಸಿದಟಛಿತೆ ಗಳನ್ನು ರೂಪಿಸಿಕೊಂಡು ನಿಯಂತ್ರಣದ ಬಗ್ಗೆ ರೈತರಿಗೆ ಹೆಚ್ಚು ಜಾಗೃತಿಯನ್ನು ಮೂಡಿಸಬೇಕು.
-ಡಾ.ಎಂ.ಆರ್.ರವಿ, ಜಿಲ್ಲಾಧಿಕಾರಿ