ವಾಡಿ: ವಸೂಲಿ ಮಾಡಲಾದ ತೆರಿಗೆ ಹಣವನ್ನು ಕುಡಿಯುವ ನೀರಿನ ಸೌಲಭ್ಯ ಒದಗಿಸಲು ಖರ್ಚು ಮಾಡಬೇಕು ಎಂದು ಆಗ್ರಹಿಸಿ ಇಂಗಳಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಲಾಸ ನಗರ ತಾಂಡಾ ಜನರು ವಾಡಿ ಪುರಸಭೆ ಆಡಳಿತ ವಿರುದ್ಧ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.
ಖಾಲಿ ಕೊಡಗಳೊಂದಿಗೆ ಸೋಮವಾರ ಪುರಸಭೆ ಕಚೇರಿಗೆ ಆಗಮಿಸಿದ ಕೈಲಾಸ ನಗರ ತಾಂಡಾದ ಬಂಜಾರಾ ಜನರು, ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು. ಕುಡಿಯುವ ನೀರಿಗಾಗಿ ಬೋರ್‌ವೆಲ್ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಕೈಲಾಸ ನಗರ ತಾಂಡಾದ ಯುವ ಮುಖಂಡ ಶ್ರೀಕಾಂತ ಚವ್ಹಾಣ, ಇಂಗಳಗಿ ಗ್ರಾಪಂ ವ್ಯಾಪ್ತಿಯಲ್ಲಿದ್ದ ತಾಂಡಾ ಬಡಾವಣೆಯನ್ನು ಕಲ್ಲು ಗಣಿಗಾರಿಕೆ ದೃಷ್ಟಿಯಿಂದ ಸ್ಥಳಾಂತರಿಸಿದ ಎಸಿಸಿ ಕಂಪನಿಯವರು ವಾಡಿ ಪುರಸಭೆ ಸಮೀಪ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಕಳೆದ ಹದಿನೈದು ವರ್ಷಗಳಿಂದ ಸ್ಥಳಾಂತರಗೊಂಡ ಕೈಲಾಸ ನಗರ ಬಡಾವಣೆಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಇಂಗಳಗಿ ಗ್ರಾಪಂಗೆ ಮತ ಹಾಕಬೇಕು. ತೆರಿಗೆ ಪುರಸಭೆಗೆ ಪಾವತಿಸಬೇಕು. ಬಡಾವಣೆಯ ಅಭಿವೃದ್ಧಿ ಮಾತ್ರ ಯಾರಿಗೂ ಕೇಳಬಾರದು. ಎಸಿಸಿ ಆಡಳಿತವೇ ಪ್ರತಿದಿನ ಟ್ಯಾಂಕರ್‌ಗಳ ಮೂಲಕ ತುಸು ನೀರು ಪೂರೈಕೆ ಮಾಡುತ್ತಿದೆ. ಗ್ರಾಪಂ ಮತ್ತು ಪುರಸಭೆ ಆಡಳಿತಗಳ ಮಧ್ಯೆ ಇರುವ ತಾಂಡಾ ಜನರು ಯಾವುದೇ ಮೂಲ ಸೌಕರ್ಯ ಪಡೆದುಕೊಳ್ಳಲಾಗದೇ ತೊಂದರೆ ಅನುಭವಿಸುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆಯಂತೂ ಗಂಭೀರವಾಗಿದೆ. ಅಧಿಕಾರಿಗಳು ಜನರ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಅತ್ಯಂತ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2017ನೇ ಸಾಲಿನಲ್ಲಿ ಕೈಲಾಸ ನಗರ ತಾಂಡಾ ಜನರಿಂದ ಪುರಸಭೆಗೆ ಒಟ್ಟು 3.96 ಲಕ್ಷ ರೂ. ತೆರಿಗೆ ಹಣ ಪಾವತಿಯಾಗಿದೆ. ಆದರೆ ಸ್ವೀಕೃತ ಲಕ್ಷಾಂತರ ರೂಪಾಯಿ ತೆರಿಗೆ ಹಣದಲ್ಲಿ ಒಂದು ರೂಪಾಯಿ ಕೂಡ ಅಧಿಕಾರಿಗಳು ಜನರಿಗಾಗಿ ಖರ್ಚು ಮಾಡಿಲ್ಲ. ಪರಿಣಾಮ ಜನರ ಬಹುಮುಖ್ಯ ಬೇಡಿಕೆಯಾಗಿರುವ ನೀರಿನ ಸಮಸ್ಯೆ ನಿವಾರಣೆಗಾಗಿ ತಾಂಡಾದಲ್ಲಿ ನಾಲ್ಕು ಬೋರ್‌ವೆಲ್ ಅಳವಡಿಸಬೇಕು. ನೀರಿನ ಮಿನಿ ಟ್ಯಾಂಕ್‌ಗಳನ್ನು ಅಳವಡಿಸಬೇಕು. ನಿರ್ಲಕ್ಷ್ಯ ವಹಿಸಿದರೆ ರಸ್ತೆ ತಡೆದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪುರಸಭೆಯ ಪ್ರಭಾರಿ ಮುಖ್ಯಾಧಿಕಾರಿ ಕಾಶೀನಾಥ ಧನ್ನಿ, ಕೈಲಾಸ ನಗರದಿಂದ ಒಬ್ಬರು ಇಂಗಳಗಿ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಜನರು ಪುರಸಭೆಯಿಂದ ಅಭಿವೃದ್ಧಿ ಕೇಳುತ್ತಿದ್ದೀರಿ. ಈ ಗೊಂದಲಕಾರಿ ವಿಷಯದ ಹಿನ್ನೆಲೆಯನ್ನು ತಿಳಿದುಕೊಂಡು ಸೂಕ್ತ ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಮುಖಂಡರಾದ ಅಶೋಕ ತಿಪೂಸಿಂಗ್, ಹೇಮಂತ ಚೌಗಲೆ, ಶಿವುಕುಮಾರ ಹೂಗಾರ, ಚಂದು ಚೌಗಲೆ, ರಮೇಶ ಜಾಧವ, ಬಸವರಾಜ ಚವ್ಹಾಣ, ಪರಶುರಾಮ ರಾಠೊಡ, ದತ್ತು ಚವ್ಹಾಣ, ಯೋಗಿನಾಥ ಚವ್ಹಾಣ, ಸುನೀಲ ರಾಠೊಡ, ಬಾಬು ಜಾಧವ, ಗಣೇಶ ಚೌಗಲೆ, ಭೀಮು ಚೌಗಲೆ ಸೇರಿದಂತೆ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.