ಹುಣಸೂರು: ಹೆಣ್ಣು ಮತ್ತು ಗಂಡು ಮಕ್ಕಳನ್ನು ಸಮನಾಗಿ ಕಾಣುವ ಜೊತೆಗೆ ಕಡ್ಡಾಯ ಶಿಕ್ಷಣ ಕೊಡಿಸಬೇಕು, ಹಳ್ಳಿಗಳಲ್ಲಿ ಅರಿವಿಲ್ಲದೆ ನಡೆಯುವ ಬಾಲ್ಯವಿವಾಹವನ್ನು ತಡೆಗಟ್ಟಲು ಎಲ್ಲರೂ ಸಹಕಾರ ನೀಡಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನವೀನ್ ಕುಮಾರ್ ಮನವಿ ಮಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಕಾರದಲ್ಲಿ ತಾಲೂಕಿನ ಬಿಳಿಕೆರೆ ಹೋಬಳಿಯ ಆಯರಹಳ್ಳಿ ಗ್ರಾಮದಲ್ಲಿ ನಡೆದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ 2018 ಜನರಿಯಿಂದ ಅಕ್ಟೋಬರ್‌ವರಗೆ 10 ತಿಂಗಳ ಅವಧಿಯಲ್ಲಿ 24 ಬಾಲ್ಯವಿವಾಹ ಪ್ರಕರಣ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ತಡೆಗಟ್ಟಲಾಗಿದೆ. ಗ್ರಾಮಗಳಲ್ಲಿ ಬಾಲ್ಯ ವಿವಾಹಕ್ಕೆ ಜನರು ಸಹಕಾರ ನೀಡಬಾರದು, ಬಾಲ್ಯವಿವಾಹ ಕಂಡುಬಂದಲ್ಲಿ ಇಲಾಖೆಗೆ ಅಥವಾ ಹತ್ತಿರದ ಪೊಲೀಸರಿಗೆ ಮಾಹಿತಿ ನೀಡಬೇಕೆಂದರು.
ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಕಳ್ಳಸಾಗಾಣಿಕೆ ದಂಧೆ ನಡೆಸುವ ಗುಂಪುಗಳಿವೆ. ಇವುಗಳಿಂದ ಮಕ್ಕಳನ್ನು ಭಿಕ್ಷಾಟನೆ, ಹೆಣ್ಣು ಮಕ್ಕಳನ್ನು ವೇಶ್ಯಾವೃತ್ತಿಗೆ ಬಳಸಿಕೊಳ್ಳುತ್ತಿವೆ. ಇವು ಮಹಾನಗರಗಳಲ್ಲಿ ಹೆಚ್ಚು ನಡೆಯುತ್ತಿವೆ. ಈ ಬಗ್ಗೆ ಗ್ರಾಮಸ್ಥರು ಎಚ್ಚರ ವಹಿಸಬೇಕು. ಅಪರಿಚಿತರು ಕಂಡು ಬಂದಾಗ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಿ, ಅನುಮಾನಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು.
ತಾಲೂಕು ಯೋಜನಾಧಿಕಾರಿ ಯಶೋಧಾಶೆಟ್ಟಿ, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಗೀತಾ, ಮೇಲ್ವಿಚಾರಕರಾದ ವೇಣುಗೋಪಾಲ, ಸೇವಾಪ್ರತಿನಿಧಿ ರಾಜೇಶ್ವರಿ, ಒಕ್ಕೂಟದ ಅಧ್ಯಕ್ಷರಾದ ರಾಘವೇಂದ್ರ, ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಮುಖಂಡರು ಭಾಗವಹಿಸಿದ್ದರು.