ದೇವನಹಳ್ಳಿ:ತಾಲೂಕಿನ ಪ್ರತಿ ಶಾಲೆಯಲ್ಲೂ ಶಾಲಾ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಬೇಕು. ಬಿಸಿಯೂಟ ತಿನ್ನುವುದರ ಮೂಲಕ ವಿದ್ಯಾರ್ಥಿಗಳು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಶಾಸಕ ಎಲ್. ಎನ್.ನಾರಾಯಣಸ್ವಾಮಿ ತಿಳಿಸಿದರು. ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಪಾಠಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಶಾಲಾ ಮಕ್ಕಳಿಗೆ ಬಿಸಿಯೂಟ ಬಡಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರ ಬಿಸಿಯೂಟ ಯೋಜನೆ ಸ್ಥಗಿತಗೊಳಿಸಿತ್ತು. ಶಾಲೆಗಳಲ್ಲಿ ಮಧ್ಯಾಹ್ನದ ಊಟ ನಿಲ್ಲಿಸಿದರೂ ಮಕ್ಕಳಿಗೆ ಅಕ್ಕಿ, ಬೇಳೆ ಪೂರೈಕೆ ಮಾಡಲಾಗುತ್ತಿತ್ತು.
18ತಿಂಗಳ ನಂತರ ಬಿಸಿಯೂಟ ಯೋಜನೆಯನ್ನು ಸರ್ಕಾರ ಮಾಡುತ್ತಿ ರುವುದು. ಶಾಲಾ ಮಕ್ಕಳಿಗೆ ಇದೊಂದು ಅನುಕೂಲವಾಗಿದೆ. ಸರ್ಕಾರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದಿತ್ತು. ಪ್ರತಿ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶವುಳ್ಳ ಆಹಾರವನ್ನು ನೀಡಬೇಕು. ಚೆನ್ನಾಗಿ ಊಟ ಮಾಡಿ ವಿದ್ಯಾರ್ಥಿಗಳು ತಮ್ಮ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದರು.
ಹಳೇ ದಾಸ್ತಾನು ಉಪಯೋಗಿಸಬೇಡಿ: ಕ್ಷೇತ್ರ ಶಿಕ್ಷಣಾ ಧಿಕಾರಿ ಅಶ್ವಥನಾರಾಯಣ ಮಾತನಾಡಿ, ತಾಲೂಕಾದ್ಯಂತ ಎಲ್ಲ ಶಾಲೆಗಳಲ್ಲಿ ಆರರಿಂದ ಹತ್ತನೇ ತರಗತಿವರೆಗೆ ಬಿಸಿಯೂಟ ಯೋಜನೆ ಜಾರಿಗೆಗೊಳಿ ಸಲಾಗಿದೆ. ಬಿಸಿಯೂಟ ತಯಾರಿಗೆ ಸಂಬಂಧಪಟ್ಟಂತೆ ಪೂರ್ವಭಾವಿ ಸಭೆಗಳನ್ನು ನಡೆಸಿ ಅಚ್ಚುಕಟ್ಟಾಗಿ ಮಾಡುವಂತೆ ಸೂಚನೆ ನೀಡಲಾಗಿದೆ. ಶಾಲೆಯಲ್ಲಿ ಬಿಸಿಯೂಟ ನೀಡುವಿಕೆಗೆ ತೊಂದರೆ ಯಾಗದಂತೆ ಕ್ರಮವಹಿಸಲಾಗಿದೆ.
ಬಿಸಿಯೂಟಕ್ಕೆ ಹಳೇ ದಾಸ್ತಾನು ಉಪಯೋಗಿಸುವಂತಿಲ್ಲ. ಅಂಗಡಿ ಯಿಂದ ಖರೀದಿಸಿ ಸ್ವತ್ಛಗೊಳಿಸಬೇಕು. ಗುಣಮಟ್ಟದ ಅಕ್ಕಿ, ತರಕಾರಿ, ಬೇಳೆ, ಎಣ್ಣೆ ಬಳಸುವಂತೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು. ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ಮುನೇಗೌಡ, ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಪ್ರಚಾರಸಮಿತಿ ಅಧ್ಯಕ್ಷ ನೆರಗನಹಳ್ಳಿ ಶ್ರೀನಿವಾಸ್, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಆರ್.ಭರತ್ ಕುಮಾರ್, ಟೌನ್ ಜೆಡಿಎಸ್ ಅಧ್ಯಕ್ಷ ಮುನಿನಂಜಪ್ಪ, ಪುರಸಭಾ ಸ್ಥಾಯಿಸಮಿತಿ ಅಧ್ಯಕ್ಷ ಎಸ್.ನಾಗೇಶ್, ಸದಸ್ಯ ವೈ.ಆರ್.ರುದ್ರೇಶ್, ಪುರಸಭೆ ಮಾಜಿ ಸದಸ್ಯ ಸೊಸೈಟಿ ಕುಮಾರ್, ಮುಖಂಡ ಲಕ್ಷ್ಮೀನಾರಾ ಯಣ್, ನಟರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಇಸಿಒ ಮಂಜುನಾಥ್, ಮುಖ್ಯಶಿಕ್ಷಕಿ ಬೊಮ್ಮಕ್ಕ ಮತ್ತಿತರರು ಇದ್ದರು.
ಗ್ರಾಮೀಣ ಮಕ್ಕಳಿಗೆ ಬಿಸಿಯೂಟ ಯೋಜನೆ ವರದಾನ
ಗ್ರಾಮೀಣ ಪ್ರದೇಶದಿಂದ ಬರುವ ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆ ವರದಾನವಾಗಿದೆ. ಯಾವುದೇ ದೇಶ ಸರ್ವತೋಮುಖವಾಗಿ ಅಭಿವೃದ್ಧಿ ಆಗಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಪ್ರತಿ ವಿದ್ಯಾರ್ಥಿಗಳು ಓದಿನಕಡೆ ಹೆಚ್ಚಿನ ಗಮನಹರಿಸಬೇಕು. ತಾವು ಶಾಲೆಗೆ ಹೋಗುವ ವೇಳೆ ಇಷ್ಟು ಸೌಲಭ್ಯಗಳು ಇರಲಿಲ್ಲ. ಈಗ ಸರ್ಕಾರ ಎಲ್ಲ ರೀತಿಯ ಸೌಲಭ್ಯ ನೀಡುತ್ತಿದೆ ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ಹೇಳಿದರು.
ವಿದ್ಯಾರ್ಥಿಗಳಿಗೆ ಊಟ ಬಡಿಸಿದ ಬಿಇಒ
ದೊಡ್ಡಬಳ್ಳಾಪುರ: ಕೋವಿಡ್ ಹಿನ್ನೆಲೆ ಸ್ಥಗಿತಗೊಂಡಿದ್ದ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಕಾರ್ಯಕ್ರಮ ಗುರುವಾರದಿಂದ ತಾಲೂಕಿನ ಶಾಲೆಗಳಲ್ಲಿ ಪುನಾರಂಭವಾಗಿವೆ. ನಗರದ ಸರ್ಕಾರಿ ಪ.ಪೂ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಅಕ್ಷರ ದಾಸೋಹ ಬಿಸಿಯೂಟ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಶುಭಮಂಗಳಾ ವಿದ್ಯಾರ್ಥಿಗಳಿಗೆ ಊಟ ಬಡಿಸುವ ಮೂಲಕ ಚಾಲನೆ ನೀಡಿದರು. ಮಕ್ಕಳು ಸಾಮಾಜಿಕ ಅಂತರದೊಂದಿಗೆ ಕುಳಿತು, ಶ್ಲೋಕ ಪಠಿಸಿ ಬಿಸಿಯೂಟ ಸೇವಿಸಿದರು. ಮೊದಲ ದಿನದ ಅಂಗವಾಗಿ ಸಿಹಿ ಹಾಗೂ ಖಾರಾ ಪೊಂಗಲ್ ಮಾಡಲಾಗಿತ್ತು. ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ನಡೆದು ಒಂದೂವರೆ ವರ್ಷ ಕಳೆದಿದ್ದು, ಕೊವಿಡ್ ಸಮಯದಲ್ಲಿ ಮಕ್ಕಳಿಗೆ ದಿನಸಿ ನೀಡಲಾಗುತ್ತಿತ್ತು. ಈಗ ಬಿಸಿಯೂಟ ಮತ್ತೆ ಆರಂಭಗೊಂಡಿದ್ದು, ಶಾಲೆಯಲ್ಲಿನ 730 ಮಕ್ಕಳು ನಿತ್ಯ ಊಟ ಮಾಡುವ ಮೂಲಕ ಹಸಿವನ್ನು ನೀಗಿಸಿಕೊಂಡು, ತರಗತಿಗಳಿಗೆ ಉತ್ಸಾಹದಿಂದ ಹಾಜರಾಗಲು ಸಹಕಾರಿಯಾಗಿದೆ ಎಂದು ಶಾಲೆಯ ಪ್ರಭಾರಿ ಉಪಪ್ರಾಂಶುಪಾಲ ಮಂಜುನಾಥ್ ಜಟ್ಟಯ್ಯ ತಿಳಿಸಿದರು. ನಗರ ಸಿಆರ್‌ಪಿ ಸಿ.ಎಚ್.ರಾಮಚಂದ್ರಯ್ಯ ಹಾಗೂ ಶಾಲೆಯ ಶಿಕ್ಷಕರು ಇದ್ದರು