ರೋಣ: ಸಾರ್ವಜನಿಕ ಶೌಚಾಲಯಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ವಿವಿಧ ವಾರ್ಡ್‌ನ ಮಹಿಳಾ ನಿವಾಸಿಗಳು ಪುರಸಭೆಯ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು. 7 ನೇ ವಾರ್ಡ್‌ನ ಮಹಿಳೆ ಅಂಬವ್ವ ನಾಯ್ಕರ ಮಾತನಾಡಿ, 6,7,8 ಹಾಗೂ 9ನೇ ವಾರ್ಡ್ ನ ಮಹಿಳೆಯರು ಅನೇಕ ವರ್ಷಗಳಿಂದ ಬಹಿರ್ದೆಸೆಗೆ ಬಯಲು ಜಾಗೆ ಮತ್ತು ಗಿಡಗಂಟಿಗಳನ್ನು ಅವಲಂಬಿಸಿದ್ದು, ಪುರಸಭೆಗೆ ನಗರದ ಅಭಿವೃದ್ಧಿಗೆ ಸರ್ಕಾರ ಕೋಟಿಗಟ್ಟಲೆ ಅನುದಾನ ನೀಡಿದರೂ ಈ ಬಡಾವಣೆಯಲ್ಲಿ ನಿಮಾರ್ಣವಾಗಿರುವ ಶೌಚಾಲಯಕ್ಕೆ ಮೂಲಭೂತ ಸೌಕರ್ಯಗಳನ್ನು ಹಾಗೂ ಸೂಕ್ತ ರಸ್ತೆಯನ್ನು ನಿರ್ಮಿಸದಿರುವುದನ್ನು ಖಂಡನೀಯ ಎಂದರು.
ಸಾರ್ವಜನಿಕ ಶೌಚಾಲಯಕ್ಕೆ ಯಾವುದೇ ರೀತಿಯಾದ ಸೌಲಭ್ಯಗಳು ಇಲ್ಲ. ಅಲ್ಲದೆ ಅಲ್ಲಿರುವ ಸಿಬ್ಬಂದಿಗಳು ಸ್ವಚ್ಛತೆಯನ್ನು ಮಾಡದೆ ಇರುವುದರಿಂದ ಗಬ್ಬೆದ್ದು ನಾರುತ್ತಿದೆ. ಇದರಿಂದ ಬಯಲಲ್ಲಿಯೆ ಶೌಚಕ್ಕೆ ಹೋಗಬೇಕಾಗಿದೆ. ಇದರಿಂದ ವಾರ್ಡ್‌ನ ಸಮಸ್ಯೆಯ ಬಗ್ಗೆ ಹಲವಾರು ಬಾರಿ ಮನವಿಯನ್ನು ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಇದರಿಂದ ಮಹಿಳೆಯರು ರಸ್ತೆಯಲ್ಲಿ ಬಯಲಿಗೆ ಹೋಗಬೇಕಾಗಿದೆ. ಸ್ವತಂತ್ರ ಭಾರತದಲ್ಲಿ ಮಹಿಳೆಯರಿಗೆ ಗೌರವ ಇಲ್ಲದಂತಾಗಿದೆ. ಮಕ್ಕಳು ಸೇರಿದಂತೆ ಅನೇಕ ಹಿರಿಯ ನಾಗರಿಕರಿಗೆ ಮಳೆಗಾಲ ಹಾಗೂ ರಾತ್ರಿ ಸಮಯದಲ್ಲಿ ಕಷ್ಟಕರವಾಗುತ್ತದೆ. ಆದ್ದರಿಂದ ಸುಲಭ ಶೌಚಾಲಯಕ್ಕೆ ಅನುಕೂಲ ಮಾಡಿ ಕೊಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು.
ಸುಶೀಲಾ ಸೊಬರದ ಮಾತನಾಡಿ, ಸಾರ್ವಜನಿಕ ಶೌಚಾಲಯಕ್ಕೆ ಮೂಲಭೂತ ಸೌಕರ್ಯಗಳನ್ನು ನೀಡುವಂತೆ ಅನೇಕ ಬಾರಿ ಪುರಸಭೆಗೆ ಮನವಿ ಸಲ್ಲಿಸುತ್ತಾ ಬಂದರೂ ಇಲ್ಲಿಯವರೆಗೆ ಮಾಡದ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದೆವೆ. ಮನೆಯಲ್ಲಿ ಇರುವ ವಯೋವೃದ್ಧರಿಗೆ ತುಂಬಾ ಸಮಸ್ಯೆಯಾಗಿದೆ. ಇದರಿಂದ ಮಹಿಳೆಯರು ತಲೆ ತಗ್ಗಿಸುವಂತಾಗಿದೆ.
ಸ್ವಾತಂತ್ರ್ಯ ದೊರಕಿ 60 ವರ್ಷ ಕಳೆದರೂ ಮಹಿಳೆಯರು ಶೌಚಾಲಯಕ್ಕಾಗಿ ಬೀದಿಗಿಳಿದು ಪ್ರತಿಭಟಿಸುವುದೆಂದರೆ ಅಳುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಲೆ ತಗ್ಗಿಸಬೇಕು ಎಂದು ದೂರಿದರು. ನಿತ್ಯ ತಂಬಿಗಿ ಹಿಡಿದುಕೊಂಡು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮ್ಮುಖದಲ್ಲಿಯೇ ಬಯಲು ಜಾಗೆಯಲ್ಲಿ ಬಹಿರ್ದೆಸೆಗೆ ಹೋಗುತ್ತಿದ್ದರು. ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಹಿಳೆಯರು ಅನುಭವಿಸುತ್ತಿರುವ ತೊಂದರೆಯನ್ನು ಯಾವುದೇ ಕಾರಣ ಹೇಳದೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಿ ಮೂರು ನಾಲ್ಕು ದಿನದಲ್ಲಿ ಶೌಚಾಲಯಕ್ಕೆ ಸೌಲಭ್ಯಗಳನ್ನು ಕಲ್ಪಿಸಬೇಕು. ಮಹಿಳೆಯರ ಮಾನ ಕಾಪಾಡುವ ನಿಟ್ಟಿನಲ್ಲಾದರೂ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ತುರ್ತು ವ್ಯವಸ್ಥೆಗೆ ಮುಂದಾಗುವಂತೆ ಮಹಿಳೆಯರು ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ಪುರಸಭೆಯ ಅಭಿಯಂತರ ಎಸ್.ಎಫ್.ನದಾಫ್ ಮಾತನಾಡಿ, ಅಲ್ಲಿನ ಸಿಬ್ಬಂದಿಗಳನ್ನು ಕರೆದು ಶೀಘ್ರವಾಗಿ ಈ ಸಮಸ್ಯೆಯನ್ನು ಬಗೆಹರಿಸುವಂತೆ ಕ್ರಮ ಕೈಗೊಳ್ಳುತ್ತೆವೆ ಎಂದರು. ಪ್ರತಿಭಟನೆಯಲ್ಲಿ ಶರಣಮ್ಮ ಸೀರಿ, ಮಂಗಳಾ ಕುರಬರ, ಮಮತಾ ಮುಲ್ಲಾ, ಸುವರ್ಣ ರೇಷ್ಮಿ, ಸುವರ್ಣ ಜಕ್ಕನಗೌಡ್ರ, ನೀಲಕ್ಕ ಬಸನಗೌಡ್ರ, ದಾಕ್ಷಾಯಿಣಿ ಪೊಲೀಸಪಾಟೀಲ, ಪಾರಮ್ಮ ಸೊಬರದ ಸೇರಿದಂತೆ ಇತರರು ಇದ್ದರು.