Advertisement

ಶಾಲಾ-ಕಾಲೇಜಿನಲ್ಲಿ ಮೂಲ ಸೌಲಭ್ಯ ಕಲ್ಪಿಸಿ

10:15 PM Oct 21, 2019 | Lakshmi GovindaRaju |

ಶಿಡ್ಲಘಟ್ಟ: ಜಿಲ್ಲೆಯಲ್ಲಿರುವ ಸರ್ಕಾರಿ ಶಾಲಾ-ಕಾಲೇಜಿಗಳಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಉತ್ತಮ ಪರಿಸರದಲ್ಲಿ ಕಲಿಕೆ ವಾತಾವರಣ ನಿರ್ಮಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ನಾಗಾಂಬಿಕಾದೇವಿ ಸೂಚಿಸಿದರು. ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಕೆ ಮಾಡಲಾಗಿದೆಯೇ ಅಕ್ಷರದಾಸೋಹ ಯೋಜನೆಯಡಿ ಬಿಸಿಯೂಟವನ್ನು ಸಮರ್ಪಕವಾಗಿ ಪೂರೈಕೆ ಮಾಡಲಾಗುತ್ತಿದೆಯೇ ಎಂದು ಪರಿಶೀಲನೆ ಮಾಡುತ್ತಿದ್ದೇವೆ.

Advertisement

ಆದರೆ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಿ ಕಲಿಕೆಗೆ ಪೂರಕವಾಗಿ ವಾತಾವರಣ ನಿರ್ಮಿಸಲಾಗಿದೆಯೇ ಎಂಬುದನ್ನು ಮರೆತಿದ್ದೇವೆ. ಅಧಿಕಾರಿಗಳು ಜಿಲ್ಲೆಯಲ್ಲಿರುವ ಸರ್ಕಾರಿ ಶಾಲಾ-ಕಾಲೇಜುಗಳ ಸ್ಥಿತಿಗತಿ ಮತ್ತು ಸೌಲಭ್ಯ ಕಲ್ಪಿಸಿರುವ ಕುರಿತು ಸರ್ವೇ ಕಾರ್ಯ ನಡೆಸಿ ಸಮಗ್ರ ಮಾಹಿತಿ ಒಳಗೊಂಡಂತೆ ವರದಿ ಸಲ್ಲಿಸಬೇಕೆಂದು ತಾಕೀತು ಮಾಡಿದರು.

ಕೋಚಿಂಗ್‌ ಸೆಂಟರ್‌: ಜಿಲ್ಲೆಯಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಯುವಕ-ಯುವತಿಯರಿಗೆ ಅವರ ಆಸಕ್ತಿಗೆ ಅನುಗುಣವಾಗಿ ಕೌಶಲ್ಯ ತರಬೇತಿ, ಕಲಿಕಾ ವಾತಾವರಣ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡಲು ಒಂದು ಜಿಲ್ಲೆಯಲ್ಲಿ ಸರ್‌ ಎಂ.ವಿಶ್ವೇಶ್ವರಯ್ಯ ಹೆಸರಿನಲ್ಲಿ ನ.01 ರಿಂದ ಕೋಚಿಂಗ್‌ ಸೆಂಟರ್‌ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಕಾಯಕ ಯೋಜನೆಯಡಿ ಸಾಲ ಸೌಲಭ್ಯ: ಜಿಲ್ಲೆಯ ಪ್ರಗತಿಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಕಾಯಕ ಯೋಜನೆಯಡಿ ಸ್ವಸಹಾಯ ಮಹಿಳಾ ಸಂಘಗಳಿಗೆ 5-10 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಬ್ಯಾಂಕ್‌ಗಳು ಮತ್ತು ಡಿಸಿಸಿ ಬ್ಯಾಂಕ್‌ಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಬೇಕೆಂದರು.

ಮಾಹಿತಿ ದಾಖಲಿಡಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 348 ಕೊಳವೆಬಾವಿಗಳನ್ನು ಕೊರೆಸಲಾಗಿದೆ ಎಂದು ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ಪ್ರಗತಿ ವರದಿ ಮಂಡಿಸಿದರು. ಕೊಳವೆಬಾವಿಗಳಿಗೆ ಮೋಟರ್‌ ಪಂಪ್‌ಗ್ಳನ್ನು ಅಳವಡಿಸಲಾಗಿದೆ ಹಾಗೂ ನೀರು ಸ್ಥಗಿತಗೊಂಡಿರುವ ಮೋಟರ್‌ ಪಂಪ್‌ಗ್ಳ ಸ್ಥಿತಿಗತಿ ಕುರಿತು ಪ್ರತಿಯೊಂದು ಗ್ರಾಪಂ ಮತ್ತು ಜಿಪಂ ಮಟ್ಟದಲ್ಲಿ ಪ್ರತ್ಯೇಕವಾಗಿ ಮಾಹಿತಿ ಇಡಬೇಕೆಂದು ಸೂಚಿಸಿದರು.

Advertisement

ನರೇಗಾ ಅನುದಾನ ಬಿಡುಗಡೆ: ಉದ್ಯೋಗ ಖಾತ್ರಿ ಯೋಜನೆಯಡಿ ಬಾಕಿ ಉಳಿಸಿಕೊಂಡಿರುವ ಅನುದಾನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮಳೆ ನೀರು ಸಂರಕ್ಷಣೆ ಮಾಡುವ ಕಾಮಗಾರಿಗಳಿಗೆ ಆದ್ಯತೆ ನೀಡಿ ಕೆರೆ-ಕುಂಟೆ ಸಹಿತ ಜಲಮೂಲಗಳನ್ನು ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದರು.ತಾಲೂಕಿನಾದ್ಯಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮಳೆನೀರು ಕೊಯ್ಲು ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ತಾಪಂ ಇಒಗೆ ಶಾಕ್‌: ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಸಿರುವುದು ಸರಿ. ಆದರೆ ನೀರು ಸಂರಕ್ಷಣೆ ಮಾಡಲು ನಿರ್ಮಿಸಿರುವ ಸಂಪ್‌ ಬಳಿಯೇ ಪ್ಲಾಸ್ಟಿಕ್‌ ಚೀಲ ಕಂಡು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ನಾವೆಲ್ಲರು ಜಿಲ್ಲೆಯನ್ನು ಪ್ಲಾಸ್ಟಿಕ್‌ ಮುಕ್ತ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ನೀವು ಪ್ಲಾಸ್ಟಿಕ್‌ ಮುಕ್ತ ತಾಲೂಕು ಮಾಡಿಲ್ಲ ಎಂಬುದು ನಿಮ್ಮ ಸೆರೆಹಿಡಿದಿರುವ ವಿಡಿಯೋದಲ್ಲಿ ಗೊತ್ತಾಗುತ್ತಿದೆ ಎಂದು ತಾಪಂ ಇಒ ಶಿವಕುಮಾರ್‌ಗೆ ಬೆವರಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಆರ್‌.ಲತಾ, ಜಿಪಂ ಸಿಇಓ ಫೌಝೀಯಾ ತರುನ್ನುಮ್‌, ಉಪವಿಭಾಗಾಧಿಕಾರಿ ರಘುನಂದನ್‌ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು,ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

ಸ್ಟಾಫ್ನರ್ಸ್‌ ಕೊರತೆ: ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸ್ಟಾಫ್ ನರ್ಸ್‌ಗಳ ಕೊರತೆಯಿಂದ ಚಿಕಿತ್ಸೆ ನೀಡಲು ಕಷ್ಟವಾಗಿದೆ. ಜೊತೆಗೆ ಸರ್ಕಾರದಿಂದ ಯಾವುದೇ ವಿಶೇಷ ಅನುದಾನ ಬಂದಿಲ್ಲ. 20 ಮಂದಿ ಸ್ಟಾಫ್ ನರ್ಸ್‌ಗಳ ಪೈಕಿ ಕೇವಲ 4 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಫಿಜಿಷಿಯನ್‌, ಸ್ತ್ರೀ ಮತ್ತು ಪ್ರಸೂತಿ ತಜ್ಞರು ಇಲ್ಲದೇ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಸಮಸ್ಯೆ ಬಗೆಹರಿಸಲು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಾಣಿ ಸಭೆಯಲ್ಲಿ ಮಾಹಿತಿ ನೀಡಿದರು. ಖಾಲಿಯಿರುವ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದೇವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ಮೂರ್ತಿ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next