ರಾಯಚೂರು: ಸಣ್ಣಪುಟ್ಟ ಸಮಸ್ಯೆಗಳಿದ್ದಲ್ಲಿ ಬಗೆಹರಿಸಿ ನಿಗದಿತ ಗುರಿಗಿಂತ ಹೆಚ್ಚಿನ ಮಟ್ಟದಲ್ಲಿ ಫಲಾನುಭವಿಗಳಿಗೆ ಬ್ಯಾಂಕಿಂಗ್ ಸೌಲಭ್ಯ ದೊರಕಿಸುವಂತೆ ಸಂಸದ ರಾಜಾ ಅಮರೇಶ್ವರ ನಾಯಕ ತಿಳಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಜಿಲ್ಲಾಮಟ್ಟದ ಲೀಡ್ ಬ್ಯಾಂಕ್ ಕಚೇರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಲ ಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯು ಕೃಷಿ ಪ್ರಧಾನವಾಗಿದ್ದು, ರೈತರನ್ನು ಬ್ಯಾಂಕ್‌ಗಳಿಗೆ ಅಲೆಸದೆ ಸ್ಥಳಕ್ಕೆ ಬ್ಯಾಂಕ್ ಅಧಿಕಾರಿಗಳು ಹೋಗಿ ಸಾಲ ಸೌಲಭ್ಯಗಳನ್ನು ತಲುಪಿಸಿ. ಬ್ಯಾಂಕ್ ಅಧಿಕಾರಿಗಳು ರೈತರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು. ಅಲ್ಲದೇ, ಅರ್ಹ ಫಲಾನುಭವಿಗಳು ಸಾಲ ಪಡೆದು ಸಕಾಲಕ್ಕೆ ಸಾಲ ಮರು ಪಾವತಿಸದಿದ್ದಲ್ಲಿ ಹೆಚ್ಚಿನ ಸೌಲಭ್ಯ ಪಡೆಯಬಹುದು ಎಂದರು.
ಕೇಂದ್ರ ಸರ್ಕಾರ ಹಿಂದುಳಿದ ರಾಯಚೂರು, ಯಾದಗಿರಿಯನ್ನು ಮಹತ್ವಾಕಾಂಕ್ಷಿ ಜಿಲ್ಲೆಯನ್ನಾಗಿ ಘೋಷಿಸಿದ್ದು, ಜಿಲ್ಲೆಯ ಅಭಿವೃದ್ಧಿಗಾಗಿ ಇತ್ತೀಚಿಗೆ ಪ್ರೋತ್ಸಾಹಧನ ನೀಡಲಾಗಿದೆ. ಅಲ್ಲದೇ, ಕೇಂದ್ರ ಸರ್ಕಾರದ ಜನಧನ ಯೋಜನೆಯಡಿ ಜಿಲ್ಲೆಯಲ್ಲಿ 40 ಸಾವಿರ ಖಾತೆಗಳನ್ನು ತೆಗೆದಿದ್ದು, ಈಚೆಗೆ ನರೇಂದ್ರ ಮೋದಿಯವರು 10 ಕೋಟಿ ಜನರ ಖಾತೆಗೆ ತಲಾ 2 ಸಾವಿರ ರೂ. ಹಾಕಿದ್ದಾರೆ ಎಂದರು.
ಎಸ್‌ಬಿಐ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕ ರಘುನಂದನ ಕೆ. ಮಾತನಾಡಿ, ವಿವಿಧ ಯೋಜನೆಗಳಡಿ ಬ್ಯಾಂಕ್‌ಗಳು 9344 ಜನ ಫಲಾನುಭವಿಗಳಿಗೆ ಸುಮಾರು 187.5 ಕೋಟಿ ರೂ. ಸಾಲ ಮಂಜೂರು ಮಾಡಿದ್ದು, ಗುರಿ ಮೀರಿ ಸಾಧಿಸಲಾಗಿದೆ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಯುವಕರಿಗೆ, ಮಹಿಳೆಯರಿಗೆ ಸಾಲ ನೀಡಲು ಸಿದ್ಧರಿದ್ದು, ಗ್ರಾಹಕರು ನೇರವಾಗಿ ಬ್ಯಾಂಕ್ ವ್ಯವಸ್ಥಾಪಕರನ್ನು ಭೇಟಿಯಾಗುವಂತೆ ಹೇಳಿದರು. ಈ ವೇಳೆ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ ಗಳಿಂದ ಸಾಲಕ್ಕೆ ಆಯ್ಕೆಯಾದ ಜಿಲ್ಲೆಯ ವಿವಿಧ ತಾಲೂಕಿನ ಫಲಾನುಭವಿಗಳಿಗೆ ಸಾಲದ ಪತ್ರ ಆದೇಶದ ಪ್ರತಿಯನ್ನು ವಿವಿಧ ಗಣ್ಯರಿಂದ ವಿತರಣೆ ಮಾಡಲಾಯಿತು.
ಜಿಪಂ ಸಿಇಒ ನೂರ ಜಹಾರ್ ಖಾನಂ, ಬೆಂಗಳೂರಿನ ಆರ್‌ಬಿಐ ಲೀಡ್ ಡೆವಲಪ್ಮೆಂಟ್ ಆಫೀಸರ್ ಎಂ.ಎಂ. ಪಥಕ್, ನಬಾರ್ಡ್‌ನ ಜಿಲ್ಲಾ ವ್ಯವಸ್ಥಾಪಕಿ ಕಲಾವತಿ ಎನ್, ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ್ ಜೋಶಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಸವರಾಜ್, ಜಿಲ್ಲಾ ಲೀಡ್ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಬಾಬು ಬಳಗಾನೂರು ಸೇರಿ ಅನೇಕರಿದ್ದರು.